Fri. Jan 2nd, 2026

ಉಜಿರೆ : ಎಸ್.ಡಿ.ಎಂ. ಪ.ಪೂ ಕಾಲೇಜಿನ ವ್ಯುತ್ಪತ್ತಿ ಸಂಘದ ವತಿಯಿಂದ ಶೈಕ್ಷಣಿಕ ಅಧ್ಯಯನ ಪ್ರವಾಸ

ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ವ್ಯುತ್ಪತ್ತಿ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ನೀಡುವ ಉದ್ದೇಶದಿಂದ ಉಜಿರೆ ಗ್ರಾಮ ಪಂಚಾಯತ್‌ಗೆ ಶೈಕ್ಷಣಿಕ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳಲಾಯಿತು. ಈ ವೇಳೆ ಗ್ರಾಮೀಣ ಆಡಳಿತ ವ್ಯವಸ್ಥೆ, ಸ್ಥಳೀಯ ಸ್ವರಾಜ್ಯ ಸಂಸ್ಥೆಗಳ ಕಾರ್ಯಪದ್ಧತಿ ಹಾಗೂ ವಿವಿಧ ಜನಕಲ್ಯಾಣ ಯೋಜನೆಗಳ ಜಾರಿಗೆ ಸಂಬಂಧಿಸಿದ ಕ್ಷೇತ್ರಮಟ್ಟದ ಅಧ್ಯಯನಕ್ಕೆ ಈ ಭೇಟಿ ಅನುವು ಮಾಡಿಕೊಟ್ಟಿತು. 

ಇದನ್ನೂ ಓದಿ: ಧರ್ಮಸ್ಥಳ: ಯೋಗ ಮತ್ತು ನೈತಿಕ ಪುಸ್ತಕವನ್ನಾಧರಿಸಿದ ಪ್ರಾಥಮಿಕ ವಿಭಾಗದ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಮಾನ್ಯಶ್ರೀ ಪ್ರಥಮ

ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತ್‌ನ ಕಾರ್ಯಚಟುವಟಿಕೆ, ಘನತ್ಯಾಜ್ಯ ವಿಲೇವಾರಿ ಘಟಕ , ಅತ್ತಾಜೆ ಕೆರೆ , ಮಲತ್ಯಾಜ್ಯ ನಿರ್ವಹಣೆ ಹಾಗೂ  ಜೈವಿಕಗೊಬ್ಬರ ತಯಾರಿ ಘಟಕ, ಅರಿವು ಡಿಜಿಟಲ್ ಗ್ರಂಥಾಲಯ ಮತ್ತು  ಕೂಸಿನ ಮನೆ ಮುಂತಾದ ವಿನೂತನ ಯೋಜನೆಗಳ ಯಶಸ್ವೀ ಕಾರ್ಯ ನಿರ್ವಹಣೆ ಕುರಿತು ಮಾಹಿತಿ ಹಂಚಿಕೊಂಡರು.

ಉಜಿರೆ ಗ್ರಾಮ ಪಂಚಾಯತ್ ಪಂಚಾಯತ್ ಅಧ್ಯಕ್ಷೆ ಉಷಾಕಿರಣ ಕಾರಂತ್ ಮಾತನಾಡಿ, ಪಂಚಾಯತ್ ವ್ಯಾಪ್ತಿಯ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ, ಸ್ವಚ್ಛ ಭಾರತ ಮಿಷನ್, ಜಲ ಸಂರಕ್ಷಣೆ, ಗೃಹ ನಿರ್ಮಾಣ ಯೋಜನೆ, ಸಾನಿಟೇಷನ್ ಇತ್ಯಾದಿ ಸರ್ಕಾರಿ ಯೋಜನೆಗಳನ್ನು ಗ್ರಾಮ ಮಟ್ಟದಲ್ಲಿ ಹೇಗೆ ಅನುಷ್ಠಾನಗೊಳಿಸಲಾಗುತ್ತಿದೆ ಎಂಬುದನ್ನು ವಿವರವಾಗಿ ಪರಿಚಯಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್.ಬಿ ಹಾಗೂ ವ್ಯುತ್ಪತ್ತಿ ಸಂಘದ ಉಪನ್ಯಾಸಕರ ಸಮ್ಮುಖದಲ್ಲಿ ಗ್ರಾಮ ಪಂಚಾಯತ್ ನಲ್ಲಿ ದಿನನಿತ್ಯದ ಆಡಳಿತ ಕಾರ್ಯವೈಖರಿಯನ್ನು ಕುರಿತು ಚರ್ಚಿಸಿ, ಪಂಚಾಯತ್ ಯಶಸ್ವಿಯಲ್ಲಿ ಯುವ ಜನರ ಪಾತ್ರ, ಮತದಾರರ ಜಾಗೃತಿ, ಸುಸ್ಥಿರ ಅಭಿವೃದ್ಧಿ ಮತ್ತು ಗ್ರಾಮೀಣ ಸ್ವಚ್ಛತೆ, ಸ್ಥಳೀಯ ಆಡಳಿತ ವ್ಯವಸ್ಥೆಯ ಪಾರದರ್ಶಕತೆ, ಜನಸಹಭಾಗಿತ್ವವು ಪ್ರಜಾಪ್ರಭುತ್ವದ ಬಲವರ್ಧನೆಗೆ ಹೇಗೆ ಸಹಕರಿಸುತ್ತದೆ ಇತ್ಯಾದಿ ವಿಚಾರಗಳ ಕುರಿತಂತೆ ಸಂವಾದ ನಡೆಸಿದರು.

ಪಂಚಾಯತ್ ಪ್ರವಾಸದ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಗಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಜಿರೆ ಗ್ರಾಮ ಪಂಚಾಯತ್ ಆಡಳಿತಕ್ಕೆ ಒಳಪಟ್ಟಿರುವ ಸಮಗ್ರ ಒಣತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಿ, ತ್ಯಾಜ್ಯ ವಿಲೇವಾರಿ ಮತ್ತು ಪರಿಷ್ಕರಣೆಯ ಹಂತಗಳನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ರವಿ ಕುಮಾರ್ ಬರಮೇಲು ಸೇರಿದಂತೆ ಸಿಬ್ಬಂದಿಗಳಾದ ನಾಗೇಶ್ ಹಾಗೂ ಉಮೇಶ್ ಉಪಸ್ಥಿತರಿದ್ದರು. ಈ ಶೈಕ್ಷಣಿಕ ಭೇಟಿಯನ್ನು ಕಾಲೇಜಿನ ವ್ಯುತ್ಪತ್ತಿ ಸಂಘದ ಸಂಯೋಜಕರಾದ ಶ್ರೀಮತಿ ದಿವ್ಯಾ ಕುಮಾರಿ, ಡಾ.ಸಾಜಿದಾ ಹಾಗೂ ಶ್ಯಾಮಿಲಾ ಸಂಯೋಜಿಸಿದರು. ಕಾಲೇಜಿನ ಗ್ರಂಥಪಾಲಕ ಮನೋಹರ್ ಶೆಟ್ಟಿ ಸಹಕರಿಸಿದರು.

Leave a Reply

Your email address will not be published. Required fields are marked *