ಧರ್ಮಸ್ಥಳ: ಸಂಸ್ಕಾರಯುತ ಶಿಕ್ಷಣವೇ ನಾಡಿನ ಆಸ್ತಿ ಎಂಬ ಧ್ಯೇಯದೊಂದಿಗೆ, ಗಿನ್ನಿಸ್ ದಾಖಲೆ ಖ್ಯಾತಿಯ ಶಾಂತಿವನ ಟ್ರಸ್ಟ್ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ 31ನೇ ವರ್ಷದ ರಾಜ್ಯಮಟ್ಟದ ‘ಜ್ಞಾನ ರಥ’ ಮತ್ತು ‘ಜ್ಞಾನ ಪಥ’ ನೈತಿಕ ಪುಸ್ತಕಗಳ ಆಧಾರಿತ ಸ್ಪರ್ಧಾ ವಿಜೇತರ ಪುರಸ್ಕಾರ ಸಮಾರಂಭವು ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು. “ಕೇವಲ ಅಂಕ ಗಳಿಕೆಯಷ್ಟೇ ಜೀವನವಲ್ಲ, ವಿದ್ಯಾರ್ಥಿಗಳು ತಮ್ಮಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸಮಾಜಕ್ಕೆ ಮಾದರಿಯಾಗುವ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕು” ಎಂದು ಅವರು ಕರೆ ನೀಡಿದರು.
ವೇದಿಕೆಯಲ್ಲಿ ಶಾಂತಿವನ ಟ್ರಸ್ಟ್ನ ಟ್ರಸ್ಟಿಗಳಾದ ಡಾ. ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಕ್ಷೇಮವನದ ನಿರ್ದೇಶಕಿ ಶ್ರೀಮತಿ ಶ್ರದ್ಧಾ ಅಮಿತ್ ಹಾಗೂ ಕಾರ್ಯದರ್ಶಿ ಯು. ಜಗನ್ನಾಥ್ ಉಪಸ್ಥಿತರಿದ್ದು ವಿಜೇತರಿಗೆ ಹರಸಿದರು. ಜೀವನ ಮೌಲ್ಯಗಳ ಕುರಿತು ಖ್ಯಾತ ಹಾಸ್ಯ ಭಾಷಣಕಾರರಾದ ಶ್ರೀಮತಿ ಸಂಧ್ಯಾ ಶೆಣೈ ಅವರು ಮಾರ್ಮಿಕವಾಗಿ ಶುಭಾಶಂಸನೆಗೈದರು.

ಸಮಾರಂಭದಲ್ಲಿ ಉಜಿರೆ ಎಸ್.ಡಿ.ಎಮ್ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಆಕರ್ಷಕ ‘ಕಥಕ್’ ನೃತ್ಯ ಪ್ರದರ್ಶನ ನಡೆಯಿತು. ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ, ಡಾ. ಐ ಶಶಿಕಾಂತ್ ಜೈನ್ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ರಾಘವೇಂದ್ರ ರಾವ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿ , ಅಶೋಕ್ ಪೂಜಾರಿ ಬಾರ್ಕೂರು ವಂದನಾರ್ಪಣೆ ಮಾಡಿದರು.




