ಉಜಿರೆ: ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಅವರು ಹೊಸ ವರ್ಷಾಚರಣೆ ವೇಳೆ ದೀಪ ಬೆಳಗಿಸಿ ಹೊಸ ವರ್ಷವನ್ನು ಸ್ವಾಗತಿಸಿ ಮಾತನಾಡುತ್ತಾ, ಜನಸಾಮಾನ್ಯರ ಆರೋಗ್ಯದ ಕಾಳಜಿಯೊಂದಿಗೆ ಪೂಜ್ಯ ಹೆಗ್ಗಡೆಯವರು ಪ್ರಾರಂಭಿಸಿದ ಈ ಆಸ್ಪತ್ರೆಯಲ್ಲಿ ಎಲ್ಲಾ ವಿಭಾಗದ ಸಿಬ್ಬಂದಿ ಸಮರ್ಪಣಾ ಭಾವದಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿದ್ದರಿಂದ ಈ ಆಸ್ಪತ್ರೆ ಜನರ ವಿಶ್ವಾಸಗಳಿಸಲು ಸಾಧ್ಯವಾಯಿತು. ಕೆಲಸ ಮತ್ತು ಸೇವೆಯಲ್ಲಿ ವ್ಯತ್ಯಾಸ ಇದೆ. ಇಲ್ಲಿನ ಸಿಬ್ಬಂದಿ ಸೇವಾಮನೋಭಾವದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದರಿಂದ ರೋಗಿಗಳಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ನೀಡಲು ಸಹಕಾರಿಯಾಗಿದೆ ಎಂದರು.

ರೋಗಿಗಳಿಗೆ ಚಿಕಿತ್ಸೆ ನೀಡುವುದರೊಂದಿಗೆ ರೋಗ ಬಾರದಂತೆ ತಡೆಯುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಉಚಿತ ಶಿಬಿರಗಳನ್ನು ಆಯೋಜಿಸಿ ಜನರಲ್ಲಿ ಆರೋಗ್ಯದ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತಿದೆ. ಈ ಆಸ್ಪತ್ರೆಯ ಮುಖಾಂತರ ಎಂಆರ್ಐ ಸ್ಕಾö್ಯನಿಂಗ್, ನರ್ಸಿಂಗ್ ಕಾಲೇಜ್ ಮುಂತಾದ ಹಲವಾರು ಯೋಜನೆಗಳನ್ನು ಪೂಜ್ಯರು ಹಾಕಿಕೊಂಡಿದ್ದು, 2026ರಲ್ಲಿ ಈ ಎಲ್ಲಾ ಯೋಜನೆಗಳು ಪೂರ್ಣಗೊಳ್ಳಲಿದ್ದು, ಬೆಳ್ತಂಗಡಿ ಮತ್ತು ಆಸುಪಾಸಿನ ತಾಲೂಕಿನ ಜನತೆಗೆ ಇನ್ನೂ ಹೆಚ್ಚಿನ ಅತ್ಯಾಧುನಿಕ ವೈದ್ಯಕೀಯ ಸೇವೆ ಇಲ್ಲಿ ದೊರೆಯಲಿದೆ. ಇಲ್ಲಿಗೆ ಬರುವ ರೋಗಿಗಳು ಶೀಘ್ರ ಗುಣಮುಖರಾಗಿ ಆರೋಗ್ಯವಂತ ಜೀವನ ನಡೆಸುವಂತಾಗಲಿ ಎಂದು ಶುಭ ಹಾರೈಸಿದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ|ದೇವೇಂದ್ರ ಕುಮಾರ್.ಪಿ, ನೇತ್ರ ಚಿಕಿತ್ಸಾ ತಜ್ಞರಾದ ಡಾ| ಸುಭಾಶ್ಚಂದ್ರ, ಮೂಳೆ ಚಿಕಿತ್ಸಾ ತಜ್ಞರಾದ ಡಾ|ಪ್ರತೀಕ್ಷ್.ಪಿ, ಡಾ| ಹರೀಶ್ ಬಿ.ಎಸ್, ಸ್ತ್ರೀರೋಗ ತಜ್ಞರಾದ ಡಾ| ಸ್ವರ್ಣಲತಾ, ಪೆಥಲಾಜಿಸ್ಟ್ ಡಾ| ಮೇಘಾ ಎಂ ಮತ್ತು ಇತರ ವೈದ್ಯರು, ದಾದಿಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಆಸ್ಪತ್ರೆಯ ಸಿಬ್ಬಂದಿಗಳ ತಂಡ ಹೂವಿನ ಎಸಳುಗಳಿಂದ ರಂಗೋಲಿ ರಚಿಸಿದ್ದರು. ಸ್ಟೋರ್ ಇನ್ಚಾರ್ಜ್ ಜಗನ್ನಾಥ ಎಂ ಕಾರ್ಯಕ್ರಮ ನಿರೂಪಿಸಿದರು. ಎಲ್ಲರಿಗೂ ಸಿಹಿ ಹಂಚಿ ಹೊಸ ವರ್ಷವನ್ನು ಸ್ವಾಗತಿಸಲಾಯಿತು.




