ಕೊಡಗು : ಕೊರಗಜ್ಜ ತುಳುನಾಡು ಸೇರಿದಂತೆ ಕೊಡಗು ಜಿಲ್ಲೆಯ ಆರಾಧ್ಯ ದೈವ. ಆದರೆ ಇದೇ ದೈವದ ಹೆಸರಲ್ಲಿ ರೀಲ್ಸ್ ಸ್ಪರ್ಧೆಗೆ ‘ಕೊರಗಜ್ಜ’ ಸಿನಿಮಾ ತಂಡ ಕರೆ ನೀಡಿದೆ. ಗೆದ್ದವರಿಗೆ ವಿದೇಶ ಪ್ರವಾಸದ ಜೊತೆ ಒಂದು ಕೋಟಿ ರೂ ಬಹುಮಾನದ ಆಮಿಷವನ್ನೂ ಒಡ್ಡಿದೆ.

ಇದನ್ನೂ ಓದಿ: ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ “ಶುಭಮಸ್ತು” ಕಾರ್ಯಕ್ರಮ
‘ಕೊರಗಜ್ಜ’ ಸಿನಿಮಾ ತಂಡ ಆಯೋಜಿಸಿರುವ ರೀಲ್ಸ್ ಸ್ಪರ್ಧೆಗೆ ಇದೀಗ ಕೊಡಗಿನಲ್ಲಿ ದೈವ ನರ್ತಕರ ಮತ್ತು ಆರಾಧಕರಿಂದ ತೀವ್ರ ಖಂಡನೆ ವ್ಯಕ್ಯವಾಗಿದೆ.
ಇತ್ತೀಚೆಗೆ ಮಲೆನಾಡು ಭಾಗದ ಸ್ಥಳೀಯ ದೈವಗಳನ್ನ ಇಟ್ಟುಕೊಂಡು ಸಿನಿಮಾ ಮಾಡಿ ಯಶಸ್ಸು ಗಳಿಸುವುದು ಹೆಚ್ಚಾಗಿದೆ. ‘ರಂಗಿತರಂಗ’, ‘ಕಾಂತಾರ’ ಮತ್ತು ‘ಕಾಂತಾರ ಚಾಪ್ಟರ್-1’ ಈ ನಿಟ್ಟಿನಲ್ಲಿ ಭರ್ಜರಿ ಯಶಸ್ಸು ಗಳಿಸಿದ ಸಿನಿಮಾಗಳು.
ಇದರ ಬೆನ್ನಲ್ಲೇ ಇದೀಗ ‘ಕೊರಗಜ್ಜ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ತುಳುನಾಡಿನ ಆರಾಧ್ಯ ದೈವವಾಗಿರುವ ಕೊರಗಜ್ಜನನ್ನು ಇಟ್ಟುಕೊಂಡು ಈ ಸಿನಿಮಾದಲ್ಲಿ ಕಥೆ ಹೆಣೆಯಲಾಗಿದೆ ಎನ್ನಲಾಗಿದೆ. ಸದ್ಯ ಈ ಚಿತ್ರತಂಡ ಸಿನಿಮಾದ ಪ್ರಚಾರಕ್ಕಾಗಿ ಇದೀಗ ಕೊರಗಜ್ಜನ ರೀಲ್ಸ್ ಮಾಡುವ ಸ್ಪರ್ಧೆ ಆಯೋಜಿಸಿದೆ. ಇದಕ್ಕೆ ಭರ್ಜರಿ ಬಹುಮಾನವನ್ನೂ ಇಟ್ಟಿದೆ.
ಈಗಾಗಲೇ ಸಾವಿರಾರು ರೀಲ್ಸ್ಗಳು ಕೂಡ ಸಿದ್ಧವಾಗಿವೆ. ಆದರೆ ಸಿನಿಮಾ ತಂಡದ ಈ ಪ್ರಚಾರದ ಗಿಮಿಕ್ಕ್ ಅನ್ನ ಕೊಡಗಿನ ದೈವ ಆರಾಧಕರು ಹಾಗೂ ದೈವ ನರ್ತಕರು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಮಡಿಕೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಸಂಘದ ಸದಸ್ಯರು ಸಿನಿಮಾ ತಂಡ ಕೀಳು ಅಭಿರುಚಿಗಾಗಿ ಈ ರೀಲ್ಸ್ ಸ್ಪರ್ಧೆಗೆ ಕರೆ ಕೊಟ್ಟಿದೆ ಎಂದು ಟೀಕಿಸಿದೆ.

ಈ ರೀಲ್ಸ್ ಸ್ಪರ್ಧೆ ಆಯೋಜನೆಯಿಂದ ಸಾವಿರಾರು ಯುವ ಜನತೆ ಬೀದಿ ಬೀದಿಗಳಲ್ಲಿ ಕೊರಗಜ್ಜನ ವೇಷ ಧರಿಸಿ ಕುಣಿಯಲು ಶುರುಮಾಡುತ್ತಾರೆ, ಇದರಿಂದ ದೈವ ನಿಂದನೆಯಾಗುತ್ತದೆ. ದೇವರ ಅಪಹಾಸ್ಯ ಮಾಡಿದಂತಾಗುತ್ತದೆ. ಇದು ಜನಪದ ಕಲೆಯಲ್ಲ. ಬದಲಿಗೆ ದೈವ ಆರಾಧನೆ. ಕೊರಗಜ್ಜನನ್ನ ನಂಬುವ ಕೋಟ್ಯಂತರ ಭಕ್ತರಿದ್ದಾರೆ. ಕೊರಗಜ್ಜನ ರೀಲ್ಸ್ ಮಾಡುವುದರಿಂದ ಇವರೆಲ್ಲರ ನಂಬಿಕೆಗೆ ಘಾಸಿಯಾಗುತ್ತದೆ ಎಂದು ದೈವ ಆರಾಧಕರು ಆಕ್ರೋಶ ಹೊರ ಹಾಕಿದ್ದಾರೆ. ಕೊರಗಜ್ಜ ಸಿನಿಮಾ ತಂಡದ ವಿರುದ್ಧ ಫಿಲ್ಮ್ ಚೇಂಬರ್ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ದೈವ ನರ್ತಕ ಮಂಜುನಾಥ್ ಆಗ್ರಹಿಸಿದ್ದಾರೆ.




