ಯಲ್ಲಾಪುರ : ಮದುವೆಗೆ ಒಪ್ಪದಿದ್ದಕ್ಕೆ ವಿಚ್ಛೇದಿತ ಮಹಿಳೆಯ ಬರ್ಬರ ಹತ್ಯೆ ಪ್ರಕರಣ ಸಂಬಂಧ ಕೊಲೆ ಆರೋಪಿ ರಫೀಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಂಜಿತಾ ಕೊಲೆಗೈದು ಪರಾರಿಯಾಗಿದ್ದ ರಫೀಕ್(30) ಮೃತದೇಹ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಕಾಳಮ್ಮನಗರ ಅರಣ್ಯದಲ್ಲಿ ಪತ್ತೆಯಾಗಿದೆ.

ಸುಮಾರು ಹತ್ತು ವರ್ಷಗಳ ಹಿಂದೆ ಗಂಡನಿಂದ ವಿಚ್ಛೇದನ ಪಡೆದಿದ್ದ ಮಹಿಳೆ ರಂಜಿತಾಳನ್ನು ರಫೀಕ್ ಪ್ರೀತಿಸುತ್ತಿದ್ದ. ಇಬ್ಬರ ಕುಟುಂಬಗಳ ನಡುವೆ ಒಳ್ಳೆಯ ಬಾಂಧವ್ಯ ಸಹ ಇದ್ದು, ರಫೀಕ್ ಆಗಾಗ ರಂಜಿತಾಳ ಮನೆಗೆ ಬಂದು ಊಟ ಮಾಡಿ ಹೋಗುತ್ತಿದ್ದ. ಒಂದು ಮಗು ಕೂಡ ಹೊಂದಿದ್ದ ರಂಜಿತಾ ತಂದೆ-ತಾಯಿ ಹಾಗೂ ಅಣ್ಣನೊಂದಿಗೆ ಯಲ್ಲಾಪುರದಲ್ಲಿ ವಾಸವಾಗಿದ್ದಳು.

ಜೀವನೋಪಾಯಕ್ಕಾಗಿ ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ಈ ನಡುವೆ ಇತ್ತೀಚೆಗೆ ಮದುವೆಯಾಗುವಂತೆ ರಂಜಿತಾಳನ್ನು ರಫೀಕ್ ಒತ್ತಾಯಿಸಿದ್ದ. ಆದರೆ ಇದಕ್ಕೆ ರಂಜಿತಾ ವಿರೋಧ ವ್ಯಕ್ತಪಡಿಸಿದ್ದಳು. ನಮ್ಮ ಸಂಬಂಧ ಹೀಗೆ ಇರಲಿ, ಆದರೆ ಮದುವೆ ಆಗುವುದಿಲ್ಲ ಎಂದು ಹೇಳಿದ್ದಳು ಎನ್ನಲಾಗಿದೆ.

ಇದರಿಂದ ಕೋಪಗೊಂಡಿದ್ದ ರಫೀಕ್ ಎಂದಿನಂತೆ ರಂಜಿತಾ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ ರಸ್ತೆ ಮಧ್ಯೆ ಆಕೆಯನ್ನು ಅಡ್ಡಗಟ್ಟಿ, ಮತ್ತೆ ಮದುವೆ ಪ್ರಸ್ತಾಪ ಮಾಡಿದ್ದ. ಆದರೆ ಆ ವೇಳೆಯೂ ರಂಜಿತಾ ನಿರಾಕರಿಸಿದ ಕಾರಣ ಆಕೆಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದ. ಆರೋಪಿ ರಫೀಕ್ ಮತ್ತು ಮೃತ ರಂಜಿತಾಳ ಅಣ್ಣ ಸ್ನೇಹಿತರಾಗಿದ್ದು, ಘಟನೆ ನಡೆಯುವ ಮುನ್ನ ರಾತ್ರಿ ಇಬ್ಬರು ಪಾರ್ಟಿ ಕೂಡ ಮಾಡಿದ್ದರು ಎಂಬುದು ಪೊಲೀಸ್ ತನಿಖೆ ವೇಳೆ ಬಯಲಾಗಿತ್ತು.



