ಕಡಬ: ನಾಲ್ಕು ತಿಂಗಳ ಹಿಂದೆಯಷ್ಟೇ ರಿಜಿಸ್ಟರ್ ಮದುವೆಯಾಗಿ ಸಂಸಾರ ಜೀವನಕ್ಕೆ ಕಾಲಿಟ್ಟಿದ್ದ ಯುವತಿಯೊಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಕಡಬ ತಾಲೂಕಿನ ಕುಟ್ರುಪ್ಪಾಡಿಯಲ್ಲಿ ನಡೆದಿದೆ.

ಘಟನೆಯ ವಿವರ:
ಕುಟ್ರುಪ್ಪಾಡಿ ಗ್ರಾಮದ ನಿವಾಸಿ ಶಿವಪ್ರಸಾದ್ ಎಂಬವರ ಪುತ್ರಿ ಶಿಲ್ಪಾ (28 ವರ್ಷ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಶಿಲ್ಪಾ ಅವರು ನಾಲ್ಕು ತಿಂಗಳ ಹಿಂದೆ ಮನೋಜ್ ಎಂಬವರನ್ನು ರಿಜಿಸ್ಟರ್ ಮದುವೆಯಾಗಿದ್ದರು. ಮದುವೆಯ ನಂತರ ದಂಪತಿ ರಾಮಕುಂಜ ಗ್ರಾಮದಲ್ಲಿ ವಾಸವಿದ್ದರು.

ಏನಿದು ಪ್ರಕರಣ?
ಶಿಲ್ಪಾ ಅವರು ರಾಮಕುಂಜದಿಂದ ಕಡಬಕ್ಕೆ ಕೆಲಸಕ್ಕೆಂದು ಹೋಗಿ ಬರುತ್ತಿದ್ದರು. ಜನವರಿ 8ರಂದು ಸಂಜೆ ಶಿಲ್ಪಾ ಅವರು ತಮ್ಮ ತಂದೆಯ ಮನೆಯಲ್ಲಿದ್ದಾಗ ವಿಷ ಸೇವಿಸಿದ್ದಾರೆ. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಹಾಗೂ ನಂತರ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜನವರಿ 9ರಂದು ಮಧ್ಯಾಹ್ನ ಶಿಲ್ಪಾ ಅವರು ಕೊನೆಯುಸಿರೆಳೆದಿದ್ದಾರೆ.

ಮಗಳ ಸಾವಿನ ಕುರಿತು ತಂದೆ ಶಿವಪ್ರಸಾದ್ ಅವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣವೇನೆಂದು ಇನ್ನು ತಿಳಿದುಬರಬೇಕಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



