ಬೆಳ್ತಂಗಡಿ: ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿ ಪಡೆದಿರುವ, ಸುಮಾರು 8 ಶತಮಾನಗಳ ಇತಿಹಾಸವಿರುವ ಸರ್ವಧರ್ಮ ಸಮನ್ವಯ ಕೇಂದ್ರ ಕಾಜೂರು ದರ್ಗಾ ಶರೀಫ್‌ನಲ್ಲಿ ಈ ವರ್ಷದ ಉರೂಸ್ ಮಹಾ ಸಂಭ್ರಮವು ಜನವರಿ 16 ರಿಂದ 25 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು. ಇಬ್ರಾಹಿಂ ತಿಳಿಸಿದ್ದಾರೆ.

ಜನವರಿ 25ರಂದು ಬೆಳಗ್ಗೆ ನಡೆಯಲಿರುವ ಉರೂಸ್ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಯ್ಯಿದ್ ಕುಂಚಿಕೋಯ ತಂಙಳ್ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ತೈಬಾ ಮರ್ಕಝ್ ಚೇರ್ಮನ್ ಸಯ್ಯಿದ್ ಸಾದಾತ್ ತಂಙಳ್ ಉದ್ಘಾಟಿಸಲಿದ್ದಾರೆ.
ಸಂಜೆ ನಡೆಯುವ ಸಮಾರೋಪ ಕಾರ್ಯಕ್ರಮದ ನೇತೃತ್ವವನ್ನು ಭಾರತದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರು ವಹಿಸಲಿದ್ದಾರೆ. ಧಾರ್ಮಿಕ ವಲಯದ ಅನೇಕ ಪ್ರಮುಖ ಉಸ್ತಾದ್‌ಗಳು ಮತ್ತು ಸಯ್ಯಿದ್‌ಗಳು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ ಹಾಗೂ ಮಾಜಿ ಸಚಿವರಾದ ರಮಾನಾಥ ರೈ, ಗಂಗಾಧರ ಗೌಡ ಸೇರಿದಂತೆ ಹಲವು ಶಾಸಕರು ಮತ್ತು ಮುಖಂಡರು ಭಾಗವಹಿಸಲಿದ್ದಾರೆ.
ಕಾಜೂರು ದರ್ಗಾದ ವೈಶಿಷ್ಟ್ಯ:
ಜಾತಿ, ಧರ್ಮದ ಭೇದವಿಲ್ಲದೆ ಲಕ್ಷಾಂತರ ಭಕ್ತರು ಆಗಮಿಸುವ ಕಾಜೂರು ದರ್ಗಾದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಉರೂಸ್‌ನ ಕೊನೆಯ ದಿನದಂದು ಸಾರ್ವಜನಿಕರಿಗೆ “ಮಹಾ ಅನ್ನದಾನ” ನಡೆಯಲಿದ್ದು, ಪ್ರತಿ ಭಾನುವಾರ ನೀಡಲಾಗುವ ವಿಶೇಷ ‘ಬೆಲ್ಲದ ಗಂಜಿ’ ವಿತರಣೆಯೂ ಅಂದು ಇರಲಿದೆ ಎಂದು ಉರೂಸ್ ಸಮಿತಿ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಸಮಿತಿ ಅಧ್ಯಕ್ಷ ಕೆ.ಯು. ಇಬ್ರಾಹಿಂ ಕಾಜೂರು, ಉಪಾಧ್ಯಕ್ಷ ಅಬ್ದುಲ್ ಅಝೀಝ್, ಕಾರ್ಯದರ್ಶಿ ಜಿ.ಹೆಚ್. ಅಬೂಬಕ್ಕರ್ ಸಿದ್ದೀಕ್ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದು ಮಾಹಿತಿ ನೀಡಿದ್ದಾರೆ.

