ರಾಮನಗರ : ರಾಮನಗರದಲ್ಲಿ ಪ್ರೇಮ ವೈಫಲ್ಯದಿಂದ ಮನನೊಂದು ಯುವತಿಯೊಬ್ಬಳು ಡೆತ್ ನೋಟ್ ಬರೆದು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ರಾಮನಗರ ಮಹಿಳಾ ಪೊಲೀಸ್ ಠಾಣೆ ಸಮೀಪವೇ ಈ ಘಟನೆ ನಡೆದಿದ್ದು, ಸಮಯಕ್ಕೆ ಸರಿಯಾಗಿ ಗಮನಿಸಿದ ಪೊಲೀಸರು ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಯುವತಿ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲ್ಲೂಕಿನ ಗಟ್ಟಿಗುಂದ ಗ್ರಾಮದ ನಿವಾಸಿಯಾಗಿದ್ದಾರೆ. ಆಕೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಒಂದೂವರೆ ವರ್ಷಗಳಿಂದ ಕನಕಪುರ ತಾಲ್ಲೂಕಿನ ತೆರಿಗೆದೊಡ್ಡಿ ಗ್ರಾಮದ ಅರುಣ್ ನಾಯ್ಕ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದರು.
ಪ್ರೀತಿಯ ಹೆಸರಿನಲ್ಲಿ ಅರುಣ್ ನಾಯ್ಕ್ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಇದೀಗ ವಿವಾಹವಾಗಲು ನಿರಾಕರಿಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಕಳೆದ ಎರಡು ತಿಂಗಳಿಂದ ಇಬ್ಬರ ನಡುವೆ ರಾಜಿ ಸಂಧಾನಕ್ಕೂ ಪ್ರಯತ್ನ ನಡೆದಿದ್ದರೂ, ಪ್ರೇಮಿ ಸ್ಪಂದಿಸದ ಹಿನ್ನೆಲೆಯಲ್ಲಿ ಯುವತಿ ತೀವ್ರವಾಗಿ ಮನನೊಂದಿದ್ದಾರೆ ಎನ್ನಲಾಗಿದೆ.

ಇದೇ ಕಾರಣದಿಂದ ಬೆಂಗಳೂರಿನಿಂದ ರಾಮನಗರಕ್ಕೆ ಬಂದ ಯುವತಿ ಡೆತ್ ನೋಟ್ ಬರೆದು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡ ಅವರನ್ನು ಪೊಲೀಸರು ತಕ್ಷಣ ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ.




