Wed. Nov 20th, 2024

Bengaluru: ಕಾರ್ಮಿಕರ ಕಾರ್ಡ್‌‌ ದಾರರಿಗೆ ಬಿಗ್‌ ಶಾಕ್‌ – ಬಿಪಿಎಲ್ ಕಾರ್ಡ್​ ಬೆನ್ನಲ್ಲೇ ಕಾರ್ಮಿಕರ ಕಾರ್ಡಿಗೂ ಕತ್ತರಿ?!

ಬೆಂಗಳೂರು(ನ.20): ರಾಜ್ಯದಲ್ಲಿ ಬರೋಬ್ಬರಿ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್​ದಾರರು ಇದ್ದಾರೆ ಎಂಬ ಸತ್ಯಸಂಗತಿ ಬಯಲಾಗಿದೆ. ಇವುಗಳನ್ನು ರದ್ದುಪಡಿಸಿ ಎಪಿಎಲ್​ಗೆ ವರ್ಗಾವಣೆ ಮಾಡಲು ಸರ್ಕಾರ ಮುಂದಾಗಿದೆ. ಅರ್ಹ ಫಲಾನುಭವಿಗಳ ಬಿಪಿಎಲ್​ ಕಾರ್ಡ್​ಗಳು ಸಹ ರದ್ದಾಗಿವೆ. ಇದರಿಂದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಚಾರವನ್ನಿಟ್ಟುಕೊಂಡು ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್​ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಈ ಬಿಪಿಎಲ್​ ಕಾರ್ಡ್​ ಗುದ್ದಾಟದ ಮಧ್ಯ ಸರ್ಕಾರದ ಕಣ್ಣು ಇದೀಗ ಕಾರ್ಮಿಕರ ಕಾರ್ಡಿನ ಮೇಲೆ ಬಿದ್ದಿದ್ದು, ಅನರ್ಹರು ಪಡೆದುಕೊಂಡಿರುವ ಕಾರ್ಮಿಕರ ಕಾರ್ಡ್​ಗಳನ್ನು ಗುರುತಿಸಿ ರದ್ದು ಮಾಡಲಾಗುತ್ತಿದೆ.

ಎಷ್ಟು ಕಾರ್ಡ್​ ಅಮಾನತು?

ರಾಜ್ಯದಲ್ಲಿ ಒಟ್ಟು 2,46,951 ಕಾರ್ಮಿಕ ಕಾರ್ಡ್​ ಗಳು ನಕಲಿ ಎಂದು ಕಾರ್ಮಿಕ ಇಲಾಖೆ ಲಿಸ್ಟ್ ಮಾಡಿದ್ದು, ಇದೀಗ ಅವುಗಳನ್ನು ಸಹ ರದ್ದು ಮಾಡಲಾಗಿದೆ ಎಂದು ತಿಳಿದುಬಂದಿದೆ. ಕಟ್ಟಡ, ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಬರೋಬ್ಬರಿ 38 ಲಕ್ಷದ 42 ಸಾವಿರ ಕಾರ್ಮಿಕರು ನೋಂದಣಿ ಮಾಡಿಕೊಂಡು ಕಾರ್ಡ್​ ಪಡೆದುಕೊಂಡಿದ್ದಾರೆ. ಈ 38.42 ಲಕ್ಷ ಕಾರ್ಡ್​ಗಳ ಪೈಕಿ 2,46,951 ಕಾರ್ಡ್​ ನಕಲಿ ಎಂದು ಗೊತ್ತಾಗಿ ಅವುಗಳನ್ನು ರದ್ದು ಮಾಡಿದೆ. ಕರ್ನಾಟಕದಲ್ಲೇ ಅತಿ ಹೆಚ್ಚು ಕಟ್ಟಡ ಕಾರ್ಮಿಕ ಕಾರ್ಡ್​ ರದ್ದಾಗಿರುವುದು ಹಾವೇರಿಯಲ್ಲಿ. ಜಿಲ್ಲೆಯಲ್ಲಿ ಒಟ್ಟು 1,69,180 ಕಾರ್ಡ್ ಗಳು ಅಮಾನತು ಮಾಡಲಾಗಿದೆ.

ನಕಲಿ ಕಾರ್ಡ್​ ಹಾವಳಿಗೆ ಬ್ರೇಕ್:
ಈ ಕಾರ್ಮಿಕ ಕಾರ್ಡ್​ನಿಂದ ಮದುವೆ, ಮರಣ, ಹೆರಿಗೆ, ಅಪಘಾತ ಸಂದರ್ಭದಲ್ಲಿ ದೊಡ್ಡ ಮೊತ್ತದ ಆರ್ಥಿಕ ನೆರವು ದೊರೆಯುತ್ತೆ. ಈ ಹಿನ್ನೆಲೆಯಲ್ಲಿ ನಕಲಿ ಜಾಬ್ ಕಾರ್ಡ್‌ಗಳನ್ನು ಸೃಷ್ಟಿಸಲಾಗಿದೆ. ಆನ್ ಲೈನ್‌ನಲ್ಲೇ ಅರ್ಜಿ ಸಲ್ಲಿಸಿ ಕಾರ್ಡ್ ಪಡೆಯುವ ಅವಕಾಶ ಇದ್ದು, ಲಕ್ಷಾಂತರ ಜನ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದರಿಂದ ಕಾರ್ಮಿಕ ಇಲಾಖೆಗೆ ದಾಖಲೆ ಪರಿಶೀಲನೆ ಕಷ್ಟವಾಗ್ತಿದೆ. ಇದು ನಕಲಿ ಕಾರ್ಡ್ ಪಡೆಯುವವರಿಗೆ ಅನುಕೂಲ. ಕೇಂದ್ರ ಸರ್ಕಾರದ ಇ-ಶ್ರಮ ಪೋರ್ಟಲ್ ಸಂಯೋಜಿಸಿ ಆಧಾರ್ ಕಾರ್ಡ್ ಆಧಾರಿತ ನೋಂದಣಿ ಮಾಡುವ ಮೂಲಕ ಅರ್ಹರಿಗೆ ಮಾತ್ರ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಇದರೊಂದಿಗೆ ನಕಲಿ ಕಾರ್ಡ್​ ಹಾವಳಿಗೆ ಬ್ರೇಕ್ ಹಾಕಲು ಮುಂದಾಗಿದೆ.

ಇ-ಹಾಜರಾತಿ ಸವಲತ್ತು ಕಲ್ಪಿಸಲು ಪ್ಲ್ಯಾನ್:
ಕಟ್ಟಡ & ಇತರೆ ನಿರ್ಮಾಣ ಕಾಮಗಾರಿ ನಡೆಯುವ ಸ್ಥಳಕ್ಕೆ ಮೊಬೈಲ್ ವ್ಯಾನ್ ತೆರಳಿ ಖುದ್ದು ಕಾರ್ಮಿಕರ ನೋಂದಣಿ ಮಾಡಲು ಯೋಜನೆ ಮಾಡಿದೆ. ಈ ಮೂಲಕ ಸ್ಥಳದಲ್ಲೇ ಇ-ಕಾರ್ಡ್ ಕೊಡುವ ವ್ಯವಸ್ಥೆಯನ್ನೂ ಜಾರಿಗೆ ತರಲು ತಯಾರಿ ನಡೆಸಿದೆ. ಕಾರ್ಮಿಕ ಇಲಾಖೆ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಕೇಂದ್ರ ಸ್ಥಾಪಿಸಿ ನೈಜ ಕಟ್ಟಡ ಕಾರ್ಮಿಕರಿಗೆ ಸವಲತ್ತು ದೊರಕಿಸಿಕೊಡುವುದರ ಜೊತೆಗೆ ಬೋಗಸ್ ಕಾರ್ಡ್ ಪತ್ತೆಗೂ ಹೆಜ್ಜೆ ಇಟ್ಟಿದೆ. ವಲಸಿಗರಾಗಿರುವುದರಿಂದ ಕೆಲಸಕ್ಕಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ ತೆರಳುತ್ತಾರೆ. ಹೋದಲ್ಲೆಲ್ಲ ನೋಂದಣಿ ಮಾಡುವ ಬದಲು ಪೋರ್ಟ್ ಮಾಡಿಕೊಳ್ಳಲು ಅವಕಾಶ ನೀಡಲು ಚಿಂತನೆ ನಡೆಸಿದೆ. ಒಂದು ಬಾರಿ ಪಡೆದ ಕಾರ್ಡ್ ಎಲ್ಲೇ ಕೆಲಸ ಮಾಡಿದರೂ ಅದರಲ್ಲಿ ಮಾಹಿತಿ ಅಡಕವಾಗುವ ಏರ್ಪಾಡು ಮಾಡಲಾಗುತ್ತದೆ.

ಕಾರ್ಮಿಕರ ಕಾರ್ಡ್ ನಿಂದ ಏನೇನು ಸೌಲಭ್ಯ?
ಕಾರ್ಡ್ ಹೊಂದಿದವರಿಗೆ ಹಲವು ಸೌಲಭ್ಯ ಸಿಗುತ್ತಿವೆ. ವಯೋ ನಿವೃತ್ತಿ ಪಿಂಚಣಿ, ಅಂಗವಿಕಲ ಪಿಂಚಣಿ, ಟೂಲ್ ಕಿಟ್, ವಸತಿ ಸೌಲಭ್ಯ, ಹೆರಿಗೆ, ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯಧನ ಸೌಲಭ್ಯ. ಅಪಘಾತ ಪರಿಹಾರ, ಮದುವೆ ಸಹಾಯಧನ, ಅಂತ್ಯಕ್ರಿಯೆ ವೆಚ್ಚ ಸೇರಿದಂತೆ 15ಕ್ಕೂ ಹೆಚ್ಚು ಸೌಲಭ್ಯಗಳಿಗೆ ಆರ್ಥಿಕ ನೆರವು ಸಿಗುತ್ತದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಕಾರ್ಡ್ ಅಮಾನತು?
ಇನ್ನು ಕರ್ನಾಟದ ಯಾವೆಲ್ಲಾ ಜಿಲ್ಲೆಗಳಲ್ಲಿ ಎಷ್ಟೆಷ್ಟು ಕಾರ್ಡ್​ ಅಮಾನತು ಮಾಡಲಾಗಿದೆ ಎನ್ನುವ ಅಂಕಿ-ಅಂಶ ನೋಡುವುದಾದರೆ, ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬರೋಬ್ಬರಿ 1,69,180 ಕಾರ್ಡ್​ಗಳನ್ನು ಅಮಾನತು ಮಾಡಲಾಗಿದೆ. ಇನ್ನುಳಿದಂತೆ ಬಾಗಲಕೋಟೆ- 2039, ಬೆಂಗಳೂರು ಗ್ರಾಮಾಂತರ-402. ಬೆಂಗಳೂರು ನಗರ- 2967, ಬೆಳಗಾವಿ- 1136, ಬಳ್ಳಾರಿ- 1498, ಬೀದ‌ರ್- 25,759, ವಿಜಯಪುರ- 2097, ಚಾಮರಾಜನಗರ- 743, ಚಿಕ್ಕಬಳ್ಳಾಪುರ- 1242, ಚಿಕ್ಕಮಗಳೂರು- 1173, ಚಿತ್ರದುರ್ಗ- 859, ದಕ್ಷಿಣ ಕನ್ನಡ- 1076, ದಾವಣಗೆರೆ- 3659, ಧಾರವಾಡ- 3503, ಗದಗ- 3051, ಕಲಬುರಗಿ- 2280, ಹಾಸನ-2266, ಕೊಡಗು- 175, ಕೋಲಾರ- 1988, ಕೊಪ್ಪಳ- 2083, ಮಂಡ್ಯ- 396, ಮೈಸೂರು- 1316, ರಾಯಚೂರು- 383, ರಾಮನಗರ-2748, ಶಿವಮೊಗ್ಗ- 6900, ತುಮಕೂರು- 1210, ಉಡುಪಿ- 210, ಉತ್ತರ ಕನ್ನಡ-4155, ಯಾದಗಿರಿ- 457 ಕಾರ್ಡ್​ಗಳನ್ನು ಅಮಾನತು ಮಾಡಲಾಗಿದೆ.

Leave a Reply

Your email address will not be published. Required fields are marked *