Thu. Nov 21st, 2024

Tamilnadu : ಗೂಗಲ್ ಮ್ಯಾಪ್ ನಂಬಿ ಹೋಗಿ ಕೆಸರಿನಲ್ಲಿ ಸಿಲುಕಿದ ವಿಶೇಷ ಚೇತನ ಅಯ್ಯಪ್ಪ ಭಕ್ತ – ತಮಿಳುನಾಡು ಪೊಲೀಸರಿಂದ ಮಂಗಳೂರಿನ ಅಯ್ಯಪ್ಪ ಭಕ್ತನ ರಕ್ಷಣೆ

ತಮಿಳುನಾಡು :(ನ.21) ಗೂಗಲ್ ಮ್ಯಾಪ್ ನಂಬಿ ಹೋಗಿ ಕೆಸರಿನಲ್ಲಿ ಸಿಲುಕಿದ ಮಂಗಳೂರಿನ ಅಯ್ಯಪ್ಪ ಭಕ್ತನನ್ನು ಮಧ್ಯರಾತ್ರಿ ತಮಿಳುನಾಡು ಪೊಲೀಸರು ರಕ್ಷಣೆ ಮಾಡಿ ಮಾನವೀಯತೆ ತೋರಿದ ಘಟನೆ ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ⭕ಕೊಕ್ಕಡ: ಸೌತಡ್ಕ ದೇವಸ್ಥಾನದಲ್ಲಿ ಯಾತ್ರಾರ್ಥಿಗಳಿಂದ ಹಲ್ಲೆ

ಮಂಗಳೂರು ಮೂಲದ ವಿಕಲ ಚೇತನ ಅಯ್ಯಪ್ಪ ಭಕ್ತರೊಬ್ಬರು 7 ಗಂಟೆಗಳ ಕಾಲ ಕೆಸರಿನಲ್ಲಿ ಸಿಲುಕಿಕೊಂಡಿದ್ದು, ಕಡೆಗೆ ಪೊಲೀಸರು ಅವರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.

ವಿಕಲಚೇತನರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ್ದ ದ್ವಿಚಕ್ರ ವಾಹನದಲ್ಲಿ ಏಕಾಂಗಿಯಾಗಿ ಮಂಗಳೂರಿನಿಂದ ಶಬರಿಮಲೆಗೆ ತೆರಳಿ ಅಲ್ಲಿ ಅಯ್ಯಪ್ಪನ ದರ್ಶನ ಮುಗಿಸಿ ಭಾನುವಾರ ನಗರಕ್ಕೆ ಮರಳುತ್ತಿದ್ದರು. ಮರಳುವಾಗ ಶೀಘ್ರ ಮನೆ ತಲುಪಬೇಕು ಎಂದು ಅವರು ಗೂಗಲ್ ಮ್ಯಾಪ್ ಮೊರೆ ಹೋಗಿದ್ದಾರೆ.

ಈ ವೇಳೆ, ಗೂಗಲ್ ಮ್ಯಾಪ್ ಅಡ್ಡ ದಾರಿಯೊಂದನ್ನು ತೋರಿಸಿದೆ. ಭಾನುವಾರ ಸಂಜೆ 7ಕ್ಕೆ ದಿಂಡಿಗಲ್ ಜಿಲ್ಲೆಯ ವಟ್ಟಲಕುಂದು ಪಕ್ಕದ ಎಂ.ವಾಡಿಪ್ಪತಿ ಪ್ರದೇಶ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಾಗಬೇಕಿದ್ದ ಅವರ ಮಾರ್ಗ ತಪ್ಪಿ, ಸಮುದ್ರ ಕಣ್ಮಾಯಿಗೆ ತೆರಳುವ ರಸ್ತೆಗೆ ಹೋಗಿದ್ದಾರೆ. ಅಲ್ಲಿ ಸೇತುವೆ ದಾಟಿದ ಬಳಿಕ ಅನಿರೀಕ್ಷಿತವಾಗಿ ಕಣ್ಮಾಯಿ ಪ್ರದೇಶದಲ್ಲಿ ಕೆಸರಿನಲ್ಲಿ ಸಿಲುಕಿಕೊಂಡಿದ್ದಾರೆ.

ಈ ವೇಳೆ ಮಳೆ ಅಬ್ಬರ ಕೂಡ ಹೆಚ್ಚಾಗಿದ್ದು, ಅಲ್ಲಿಯೇ ಏಳು ಗಂಟೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಸುತ್ತಮುತ್ತ ಯಾರೂ ಇಲ್ಲದ ಕಾರಣ ಅವರ ಸಹಾಯಕ್ಕೆ ಕೂಡ ಯಾರು ನೆರವಾಗಲಿಲ್ಲ. ಏಳು ಗಂಟೆಗಳ ಕಾಲ ಕೆಸರಿನಲ್ಲಿ ಸಿಲುಕಿ ಮೇಲೆ ಬರಲು ಸಾಧ್ಯವಾಗದೇ ಒದ್ದಾಡಿದ ಅವರು, ಕಡೆಗೆ ದಿಕ್ಕು ತೋಚದೇ ಕರ್ನಾಟಕದ ಪೊಲೀಸರಿಗೆ ಕರೆ ಮಾಡಿ ಅವರ ಸಹಾಯದಿಂದ ಸಂಬಂಧಿಕರಿಗೂ ವಿಷಯ ಮುಟ್ಟಿಸಿದ್ದಾರೆ.

ಕಡೆಗೆ ಕರ್ನಾಟಕ ಪೊಲೀಸರು ದಿಂಡಿಗಲ್ ಪೊಲೀಸ್ ಕಂಟ್ರೋಲ್ ರೂಮ್ ಗೆ ವಿಷಯ ಮುಟ್ಟಿಸಿದ್ದಾರೆ.ಬಳಿಕ ದಿಂಡಿಗಲ್ ಪೊಲೀಸರು ಮಧ್ಯರಾತ್ರಿ ಸುಮಾರು 2 ಗಂಟೆಗೆ ಸುರಿಯುತ್ತಿರುವ ಮಳೆ ಮಧ್ಯೆ ಯುವಕನ ಸಹಾಯಕ್ಕೆ ಧಾವಿಸಿದ್ದಾರೆ.

ದಿಂಡಿಗಲ್ ಜಿಲ್ಲೆಯ ವಟ್ಟಲಕುಂದು ಬಳಿಯಿರುವ ಎಂ.ವಾಡಿಪ್ಪಟಿ ಸಮುದ್ರಂ ಕಣ್ಮಾಯಿ ಪ್ರದೇಶಕ್ಕೆ ತೆರಳಿ ಆತನನ್ನು ಹುಡುಕಿ ರಕ್ಷಣೆ ಮಾಡಿದ್ದಾರೆ.

ತಕ್ಷಣ ಅವರಿಗೆ ಆಹಾರ ವ್ಯವಸ್ಥೆ ಮಾಡಿ, ಮರು ದಿನ ಬೆಳಗ್ಗೆ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪುವ ವ್ಯವಸ್ಥೆ ಮಾಡಿದ್ದಾರೆ. ತಮಿಳುನಾಡು ಪೊಲೀಸರ ಈ ಸಹಾಯಕ್ಕೆ ಕರ್ನಾಟಕ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿ, ಧನ್ಯವಾದವನ್ನು ಅರ್ಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *