Sat. Nov 23rd, 2024

Ujire: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸಂಶೋಧನಾ ಕಾರ್ಯಾಗಾರ

ಉಜಿರೆ:(ನ.22) ನಿರಂತರ ಅಧ್ಯಯನ, ಹೊಸದನ್ನು ತಿಳಿದುಕೊಳ್ಳುವ ಹಂಬಲ ಮತ್ತು ವಿವಿಧ ಪ್ರಶ್ನೆಗಳನ್ನು ಮುಂದಿಟ್ಟು ಶೋಧನೆಗೆ ಮುಂದಾಗುವ ಸಾಮಥ್ರ್ಯದಿಂದ ಪ್ರಕಟಣಾ ಯೋಗ್ಯ ಸಂಶೋಧನಾ ಬರಹಗಳನ್ನು ಬರೆಯಲು ಸಾಧ್ಯ ಎಂದು ನಿಟ್ಟೆಯ ಜಸ್ಟೀಸ್ ಕೆ.ಎಸ್. ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಪ್ರಾಧ್ಯಾಪಕ ಡಾ.ಟಿ ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ⭕ಮಂಗಳೂರು : ಅಂಗವಿಕಲ ಬೀದಿ ವ್ಯಾಪಾರಿಗೆ ಹಫ್ತಾ ವಸೂಲಿ ಹೆಸರಲ್ಲಿ ಕಿರುಕುಳ ಆರೋಪ

ಉಜಿರೆಯ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಸಂಶೋಧನೆ ಮತ್ತು ಅಭಿವೃದ್ಧಿ ಘಟಕವು ‘ಪ್ರಕಟಣಾಯೋಗ್ಯ ಸಂಶೋಧನಾ ಬರಹ ಬರೆಯುವ ವಿಧಾನಗಳು’ ಕುರಿತು ಆಯೋಜಿಸಿದ ಎರಡು ದಿನಗಳ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸ್ನಾತಕೋತ್ತರ ಅಧ್ಯಯನದಲ್ಲಿ ಪಠ್ಯವನ್ನು ಅಭ್ಯಸಿಸುವುದು ಮತ್ತು ಶೈಕ್ಷಣಿಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುವುದು ಮಾತ್ರ ವಿದ್ಯಾರ್ಥಿಗಳ ಆದ್ಯತೆಯಾದಲ್ಲಿ ಪದವಿ ಶಿಕ್ಷಣ ಹಾಗೂ ಸ್ನಾತಕೋತ್ತರ ಪದವಿ ಅಧ್ಯಯನದ ನಡುವೆ ಯಾವುದೇ ವ್ಯತ್ಯಾಸಗಳಿರುವುದಿಲ್ಲ. ವಿದ್ಯಾರ್ಥಿಗಳು ಗಳಿಸಿದ ಅಂಕಗಳಿಗಿಂತ ಪ್ರಕಟಿತ ಸಂಶೋಧನಾ ಬರಹಗಳು ಹೆಚ್ಚಿನ ಪ್ರಾಮುಖ್ಯತೆ ಪಡೆದಿವೆ ಎಂದರು.

ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಸಂಶೋಧನಾ ಬರಹಗಳನ್ನು ಪ್ರಖ್ಯಾತ ನಿಯತಕಾಲಿಕೆಗಳಲ್ಲಿ ಪ್ರಕಟಿಸುವುದರ ಪ್ರಾಧಾನ್ಯತೆಯನ್ನು ಸ್ನಾತಕೋತ್ತರ ಪದವಿ ಅಧ್ಯಯನ ನಿರತ ವಿದ್ಯಾರ್ಥಿಗಳು ಅರಿತುಕೊಳ್ಳುವುದು ಅನಿವಾರ್ಯವಾಗಿದೆ. ಸಂಶೋಧನಾ ಬರಹಗಳು ವೃತ್ತಿಯಲ್ಲಿ ಉನ್ನತ ವೇತನ ಶ್ರೇಣಿಯನ್ನು ಪಡೆಯುವುದಕ್ಕೂ ನೆರವಾಗುತ್ತವೆ. ಸ್ನಾತಕೋತ್ತರ ಅಧ್ಯಯನನಿರತ ವಿದ್ಯಾರ್ಥಿಗಳು ಸಂಶೋಧನಾ ಬರಹಗಳನ್ನು ಪ್ರಕಟಿಸುವುದರ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಸಂಪೂರ್ಣವಾಗಿ ಸಂಶೋಧನೆಯ ಆಳ-ಅಗಲಗಳನ್ನು ಅರಿಯುವುದಕ್ಕೆ ಬಹಳಷ್ಟು ಸಮಯ ಬೇಕಾಗುತ್ತದೆ. ನಿರಂತರ ಪರಿಶ್ರಮವು ಪ್ರಕಟಣಾಯೋಗ್ಯ ಸಂಶೋಧನಾ ಬರಹಗಳನ್ನು ಬರೆಯುವುದಕ್ಕೆ ಸಹಾಯಕವಾಗುತ್ತದೆ ಎಂದರು. ಪ್ರಾಂಶುಪಾಲ ಡಾ.ಬಿ.ಎ. ಕುಮಾರ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ವಿಶೇಷ ಆಸಕ್ತಿಯೊಂದಿಗೆ ಸೃಜನಾತ್ಮಕ ಸಂಶೋಧನೆಗಳಿಗೆ ಅಗತ್ಯವಾದ ಸಹಕಾರ ಮತ್ತು ಪ್ರೋತ್ಸಾಹವನ್ನು ಒದಗಿಸುತ್ತಿದ್ದು, ಕೇವಲ ಪ್ರಾಧ್ಯಾಪಕರ ಸಂಶೋಧನೆಗಳಿಗೆ ‘ಸೀಡ್ ಮನಿ’ ರೂಪದಲ್ಲಿ ನೀಡುತ್ತಿದ್ದ ಧನ ಸಹಾಯವನ್ನು ಪ್ರಸಕ್ತ ಶೈಕ್ಞಣಿಕ ವರ್ಷದಿಂದ ವಿದ್ಯಾರ್ಥಿ ಸಂಶೋಧಕರಿಗೂ ವಿಸ್ತರಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಅಧ್ಯಯನ ವಿಭಾಗಗಳ ಡೀನ್ ಡಾ. ವಿಶ್ವನಾಥ್ ಪಿ, ಹಾಗೂ ಕಾರ್ಯಕ್ರಮ ಸಂಚಾಲಕರಾದ ಡಾ. ಲಕ್ಷ್ಮೀನಾರಾಯಣ ಕೆ.ಎಸ್. ಮತ್ತು ಡಾ. ನಾರಾಯಣ ಹೆಬ್ಬಾರ್ ಉಪಸ್ಥಿತರಿದ್ದರು. ಸಂಶೋಧನೆ ಮತ್ತು ಅಭಿವೃದ್ಧಿ ಘಟಕಗಳ ನಿರ್ದೇಶಕರಾದ ಡಾ. ಸೌಮ್ಯ ಬಿ.ಪಿ. ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.

Leave a Reply

Your email address will not be published. Required fields are marked *