ಉಳ್ಳಾಲ:(ನ.23) ಸೋಮೇಶ್ವರ ಪುರಸಭೆಯಲ್ಲಿ ಈ ಹಿಂದೆ ಮುಖ್ಯಾಧಿಕಾರಿಯಾಗಿದ್ದ ವಾಣಿ ಆಳ್ವ ಎಂಬ ಭ್ರಷ್ಟ ಅಧಿಕಾರಿಣಿಯೇ ಅಕ್ರಮ ಗೆಸ್ಟ್ ಹೌಸ್ ಮಾಫಿಯಾವನ್ನ ಪೋಷಿಸಿದ್ದಾರೆ.ಸೋಮೇಶ್ವರ ರೆಸಾರ್ಟ್ ನ ಈಜುಕೊಳದಲ್ಲಿ ಮೃತಪಟ್ಟ ಮೈಸೂರಿನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ಅಕ್ರಮ ಗೆಸ್ಟ್ ಹೌಸ್ ಗಳನ್ನ ಪೋಷಿಸುತ್ತಿರುವ ಭ್ರಷ್ಟ ಅಧಿಕಾರಿಗಳ ಸವಲತ್ತುಗಳನ್ನ ಕಡಿತಗೊಳಿಸಿ ತಲಾ ಐದು ಕೋಟಿ ಪರಿಹಾರ ನೀಡಬೇಕೆಂದು ಟೀಮ್ ಸೇವ್ ಬಟ್ಟಪ್ಪಾಡಿಯ ಕಾರ್ಯದರ್ಶಿ ಸುಖೇಶ್ ಜಿ ಉಚ್ಚಿಲ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ⭕Karkala: ಶಾಲಾ ಬಸ್ & ಬೈಕ್ ಮುಖಾಮುಖಿ ಢಿಕ್ಕಿ
ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.2011 ರಲ್ಲಿ ಉಚ್ಚಿಲ ಪ್ರದೇಶದ ಸಿಆರ್ ಝಡ್ ಪ್ರದೇಶದ ಐವತ್ತಕ್ಕೂ ಹೆಚ್ಚಿನ ಅಕ್ರಮ ಗೆಸ್ಟ್ ಹೌಸ್ ಗಳ ವಿರುದ್ಧ ಅವತ್ತಿನ ಜಿಲ್ಲಾಧಿಕಾರಿ ಪೊಣ್ಣುರಾಜ್ ಅವರು ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಜೆಸಿಬಿಯಿಂದ ಕಟ್ಟಡಗಳನ್ನ ನೆಲಸಮಗೊಳಿಸಿದ್ದರು.ಆ ನಂತರ ಬಂದ ಯಾವುದೇ ಅಧಿಕಾರಿಗಳು ಸೋಮೇಶ್ವರ,ಉಚ್ಚಿಲದ ಅಕ್ರಮ ಗೆಸ್ಟ್ ಹೌಸ್ಗಳ ವಿರುದ್ಧ ಕ್ರಮ ಕೈಗೊಳ್ಳದ ಪರಿಣಾಮ ಮೂವರು ವಿದ್ಯಾರ್ಥಿನಿಯರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಅಕ್ರಮಗಳಿಗೆ ಸಾಥ್ ನೀಡುವ ಅಧಿಕಾರಿಗಳು ದುರ್ಘಟನೆಗಳು ನಡೆದಾಗ ನಮ್ಮ ಗಮನಕ್ಕೆ ಬಂದಿಲ್ಲವೆಂದು ಸಬೂಬು ಹೇಳಿ ಸಾಚಾರಂತೆ ವರ್ತಿಸುತ್ತಾರೆ.ಘಟನೆಗೆ ಇವರೇ ಕಾರಣರೆಂದು ಯಾರೋ ಇಬ್ಬರನ್ನ ಹಿಡಿದು ಜೈಲಿಗೆ ಹಾಕುವ ನಾಟಕ ಮಾಡುತ್ತಾರೆ.ವಾಝ್ಕೊ ರೆಸಾರ್ಟಿನ ಅಸಲಿ ಮಾಲೀಕ ಜರ್ಮನಿಯಲ್ಲಿದ್ದಾನೆ.ಆತನನ್ನ ಬ್ಲ್ಯಾಕ್ ಲಿಸ್ಟ್ ಗೆ ಸೇರಿಸಿ,ದೇಶದಲ್ಲಿ ಆತನ ಹೆಸರಲ್ಲಿರುವ ಆಸ್ತಿಗಳನ್ನ ಜಪ್ತಿ ಮಾಡಬೇಕು.ಅಧಿಕಾರಿಗಳು ಸಾಚಾಗಳಾದರೆ ಸೋಮೇಶ್ವರದಿಂದ ಬಟ್ಟಪ್ಪಾಡಿ ತನಕದ ಅಕ್ರಮ ಗೆಸ್ಟ್ ಹೌಸ್ಗಳಿಗೆ ಬೀಗ ಜಡಿಯುವ ಕೆಲಸ ಯಾಕೆ ಮಾಡಿಲ್ಲ.ಈಜು ಕೊಳಕ್ಕೆ ಲೈಫ್ ಗಾರ್ಡ್ ನೇಮಿಸದೆ ,ನೀರಲ್ಲಿ ಪಂಕ್ಚರ್ ಶಾಪಿನ ಹಳೆಯ ಕಳಪೆ ಟ್ಯೂಬ್ ಇರಿಸಿದ್ದಾರೆ.ಸುರಕ್ಷತೆಗಳನ್ನ ಪರಿಶೀಲಿಸಬೇಕಾಗಿರುವುದು ಸ್ಥಳೀಯಾಡಳಿತದ ಅಧಿಕಾರಿಗಳ ಕರ್ತವ್ಯ ಅಲ್ಲವೆ ಎಂದು ಸುಕೇಶ್ ಪ್ರಶ್ನಿಸಿದರು.
ಗೆಸ್ಟ್ ಹೌಸ್ ಮಾಫಿಯ ಪೋಷಿಸಿದ್ದೆ ವಾಣಿ ಆಳ್ವ:
ಸೋಮೇಶ್ವರ ಪುರಸಭೆಯಲ್ಲಿ ವಾಣಿ ಆಳ್ವ ಮುಖ್ಯಾಧಿಕಾರಿಯಾಗಿದ್ದ ಕಾಲದಲ್ಲಿ ಅಕ್ರಮ ಗೆಸ್ಟ್ ಹೌಸ್ ಗಳ ಭ್ರಷ್ಟಾಚಾರವು ಪರಾಕಷ್ಟೆಯನ್ನ ತಲುಪಿತ್ತು.ಆಕೆಯ ಕಾನೂನು ಹೇಗಿತ್ತೆಂದರೆ ಮಾಫಿಯಗಳಿಗೆ ಇಲಾಖೆಯಿಂದ ನೋಟೀಸು ಬಿಟ್ಟು ಆಕೆಯೇ ಅವರಿಗೆ ವಕೀಲರನ್ನ ನೇಮಿಸಿ ಪ್ರಕರಣಕ್ಕೆ ತಡೆ ಕೊಡಿಸುವ ಚಾಲಾಕಿತನ ಮೆರೆಯುತ್ತಿದ್ದರು.ಉಚ್ಚಿಲದಲ್ಲಿ ಕ್ಯಾಂಪ್ 21 ಅಕ್ರಮ ಗೆಸ್ಟ್ ಹೌಸ್ ಕಾರ್ಯಾಚರಿಸುತ್ತಿದೆ.ವಿಧವೆಯೋರ್ವರು ಜೀವನೋಪಾಯಕ್ಕಾಗಿ ಗೆಸ್ಟ್ ಹೌಸ್ ನಡೆಸುತ್ತಿರುವ ನೆಪ ಹೇಳಿ ಟ್ರೇಡ್ ಲೈಸೆನ್ಸ್ ಪಡೆಯಲು ಹೈಕೋರ್ಟಿಗೆ ಮಾಫೀಯಗಳು ಮೊರೆ ಹೋಗಿದ್ದರು.ವಿಧವೆ ಜೀವನೋಪಾಯಕ್ಕಾಗಿ ಹೋಂ ಸ್ಟೇ ನಡೆಸೋದಾದರೆ ಆಕೆ ಅಲ್ಲಿ ವಾಸವಿರಬೇಕು.ವಾಸ್ತವದಲ್ಲಿ ಅಲ್ಲಿ ಯಾವುದೇ ವಿಧವೆ ವಾಸವಿಲ್ಲ.ಮಾಫಿಯಾಗಳು ಮತ್ತು ಸ್ಥಳೀಯಾಡಳಿತದ ಅಧಿಕಾರಿಗಳ ಹೊಂದಾಣಿಕೆಯಿಂದ ಇವರಿಗೆ ಕೋರ್ಟ್ ಮೂಲಕ ಟ್ರೇಡ್ ಲೈಸೆನ್ಸ್ ಸಿಗುತ್ತದೆ ಎಂದು ಸುಖೇಶ್ ಉಚ್ಚಿಲ್ ಆರೋಪಿಸಿದರು.
ಜಲಚರ ಮತ್ತು ಸ್ಥಳೀಯರ ರಕ್ಷಣೆಗಾಗಿ ಸಿಆರ್ ಝಡ್ ಕಾನೂನು ರಚಿಸಲಾಗಿತ್ತು.ಸಿಆರ್ ಝಡ್ ಪ್ರದೇಶದಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ ಮಾಡಲು ಅವಕಾಶವಿಲ್ಲ. ವಿದ್ಯಾರ್ಥಿನಿಯರು ಮೃತಪಟ್ಟ ಈಜು ಕೊಳವು ಸಿಆರ್ ಝಡ್ ವ್ಯಾಪ್ತಿಯಲ್ಲಿದೆ.ಕೆಳಗಿನ ಅಧಿಕಾರಿಗಳು ಜಿಲ್ಲೆಗೆ ವರ್ಗಾವಣೆ ಪಡೆದು ಬರುವ ಹಿರಿಯ ಅಧಿಕಾರಿಗಳಲ್ಲಿ ಈ ವಿಚಾರಗಳನ್ನ ಮುಚ್ಚಿಡುತ್ತಾರೆ.ನಾವು ಪ್ರಗತಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯ ವಿರೋಧಿಗಳಲ್ಲ.ಕಾನೂನು ಎಲ್ಲರಿಗೂ ಒಂದೇ ರೀತಿ ಜಾರಿ ಮಾಡಿ.ಕಾನೂನನ್ನ ಕಠಿಣಗೊಳಿಸಿ ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿದ್ದಾರೆ.ಅದಕ್ಕೆ ಸ್ಪಷ್ಟ ನಿದರ್ಶನ ಜಿಲ್ಲೆಯ ಮರಳು ಮಾಫಿಯ.ಮರಳು ಸಮಸ್ಯೆಯನ್ನ ಬಗೆಹರಿಸುವುದು ಅಧಿಕಾರಿಗಳಿಗೆ ಸೆಕೆಂಡುಗಳ ಕೆಲಸವಾಗಿದೆ ಎಂದು ಸುಖೇಶ್ ಉಚ್ಚಿಲ್ ಹೇಳಿದರು.
ಆಧುನಿಕ ಹ್ಯೂಮನ್ ರೈಟ್ಸ್ ಕಮಿಟಿ, ಇಂಡಿಯಾದ ಅಧ್ಯಕ್ಷರು ಮತ್ತು ಆರ್ ಟಿಐ ಕಾರ್ಯಕರ್ತರಾದ ದೀಪಕ್ ರಾಜೇಶ್ ಕುವೆಲ್ಲೊ,ಟೀಮ್ ಸೇವ್ ಬಟ್ಟಪ್ಪಾಡಿಯ ಕಾರ್ಯಕರ್ತರಾದ ವಸಂತ್ ಎಸ್ ಉಚ್ಚಿಲ್ ,ಶಬೀರ್ ತಲಪಾಡಿ,ಹ್ಯೂಮನ್ ರೈಟ್ಸ್ ಆಂಡ್ ಅಗೈನ್ಸ್ಟ್ ಪೊಲ್ಯೂಷನ್ ಫಾರಮ್ ಕರ್ನಾಟಕದ ಜಿಲ್ಲಾಧ್ಯಕ್ಷರಾದ ಶಬೀರ್ ಉಳ್ಳಾಲ್, ಜಿಲ್ಲಾ ಕಾರ್ಯದರ್ಶಿ ಎಂ.ದಿವಾಕರ ರಾವ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.