ಬೆಳ್ತಂಗಡಿ:(ನ.27) ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಅರಣ್ಯವಾಸಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸಭೆ ನಡೆಸಿ ಮಹತ್ವದ ತೀರ್ಮಾನಗಳನ್ನು ಕೈಗೊಂಡಿರುವುದು ಶ್ಲಾಘನೀಯ ಎಂದು ಬೆಳ್ತಂಗಡಿ ತಾಲೂಕು ಎಸ್.ಟಿ ಘಟಕದ ಅಧ್ಯಕ್ಷ ಜಯಾನಂದ ಪಿಲಿಕಲ ತಿಳಿಸಿದ್ದಾರೆ.
ಇದನ್ನೂ ಓದಿ: 💠ಬೆಳ್ತಂಗಡಿ : ತಾಲೂಕು ಮಟ್ಟದ ಇಲಾಖಾಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಅರಣ್ಯವಾಸಿಗಳ ವಾಸಿಸುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಮರೀಚಿಕೆಯಾಗಿತ್ತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುತುವರ್ಜಿ ವಹಿಸಿರುವುದರಿಂದ ಆದಿವಾಸಿ ಸಮುದಾಯಕ್ಕೆ ಅನುಕೂಲವಾಗಲಿದೆ.
ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಿರ್ಣಯಗಳನ್ನು ಜಿಲ್ಲಾಡಳಿತ ತಕ್ಷಣವೇ ಜಾರಿಗೊಳಿಸಬೇಕು. ಆದಿವಾಸಿ ಮಲೆಕುಡಿಯ ಸಮುದಾಯಕ್ಕೆ ಸೌಲಭ್ಯ ಒದಗಿಸಿ ಸಾಮಾಜಿಕ ಸಮಾನತೆ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.
ಅರಣ್ಯವಾಸಿಗಳು ವಾಸಿಸುವ ಪ್ರದೇಶಕ್ಕೆ ಸಮರ್ಪಕ ರಸ್ತೆ ಸಂಪರ್ಕ, ಇನ್ನೂ ಬೆಳಕು ಕಾಣದ ಮನೆಗಳಿಗೆ ಕೂಡಲೇ ವಿದ್ಯುತ್ ಸಂಪರ್ಕ ಒದಗಿಸುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ದ.ಕ ಜಿಲ್ಲೆಗೆ ಸಂಬಂಧಿಸಿ ಈ ಕೂಡಲೇ ಅಧಿಕಾರಿಗಳು ಕಾರ್ಯಪ್ರವೃತ್ತವಾಗಿ ಸೌಕರ್ಯ ಒದಗಿಸಬೇಕು.
ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ ಅರಣ್ಯವಾಸಿಗಳು ವಾಸಿಸುವ ಪ್ರದೇಶಗಳಿಗೆ ಜಿಲ್ಲಾಡಳಿತ ಭೇಟಿ ನೀಡಿ ಕಾರ್ಯಯೋಜನೆ ರೂಪಿಸಬೇಕು. ಆ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳನ್ನು ಅರಣ್ಯವಾಸಿಗಳಿಗೂ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿದಿದ್ದಾರೆ.