Fri. Dec 27th, 2024

Dharmasthala: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಸಮವಸರಣ ಪೂಜೆ ಸಂಪನ್ನ

ಧರ್ಮಸ್ಥಳ:(ಡಿ.2) ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತ ಸಮವಸರಣ ಪೂಜಾ ಕಾರ್ಯಕ್ರಮವು ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಚಂದ್ರಶಾಲೆಯಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ಭಾನುವಾರ ನಡೆಯಿತು.

ಇದನ್ನೂ ಓದಿ: 💠ಬೆಳ್ತಂಗಡಿ: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಹಿಂದೂ ಹಿತ ರಕ್ಷಣಾ ಸಮಿತಿಯಿಂದ ಡಿ.4 ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಚಂದ್ರಶಾಲೆಯಲ್ಲಿ ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿಯನ್ನು ವಿರಾಜಮಾನಗೊಳಿಸಿ, ಶ್ರೀ ಬಾಹುಬಲಿ ಸೇವಾ ಸಮಿತಿಯ ಶ್ರಾವಕ ಶ್ರಾವಕಿಯರು ಭಜನೆ, ಸ್ತೋತ್ರ ಮತ್ತು ಪೂಜಾಮಂತ್ರ ಪಠಿಸಿ, ಅಷ್ಟವಿಧಾರ್ಚನೆ ಪೂಜೆ ಸಲ್ಲಿಸಿದರು.

ಅರಹಂತ ಪೂಜೆ, ಸಿದ್ಧಮರಮೇಷ್ಠಿಗಳ ಪೂಜೆ, ಬಾಹುಬಲಿ ಸ್ವಾಮಿ ಪೂಜೆ, ಶ್ರುತಪೂಜೆ ಮತ್ತು ಗಣಧರಪರಮೇಷ್ಠಿ ಪೂಜೆ ನಡೆಯಿತು. ಶಿಶಿರ್‌ ಇಂದ್ರ ಅವರು ಮಂತ್ರಪಠಿಸಿದರು. ಸಾಮೂಹಿಕ ಮಹಾಮಂಗಳಾರತಿ ಸಲ್ಲಿಸಿ ಶಾಂತಿ ಮಂತ್ರ ಪಠಿಸಲಾಯಿತು.

ಜಿನ ಭಜನೆಯ ಮೂಲಕ ಶ್ರೀ ಚಂದ್ರನಾಥ ಸ್ವಾಮಿಯನ್ನು ಸ್ತುತಿಸಲಾಯಿತು. ಸೌಮ್ಯ, ಮಂಜುಳಾ ಹಾಗೂ ಸಾವಿತ್ರಿ ಅವರ ಸೊಗಸಾದ
ಗಾಯನಕ್ಕೆ ತಬಲದಲ್ಲಿ ಶೋಧನ್‌ ಧರ್ಮಸ್ಥಳ ಮತ್ತು ಹಾರ್ಮೋನಿಯಂನಲ್ಲಿ ರವಿರಾಜ್ ಉಜಿರೆ‌ ಸಹಕರಿಸಿದರು.

ಬೆಂಗಳೂರಿನ ವಿಶ್ವಶಾಂತಿ ಯುವಸೇವಾ ಸಮಿತಿಯ ನವೀನ್‌ ಜಾಂಬಳೆ ಮತ್ತು ತಂಡದವರಿಂದ ಜಿನಗಾನೋತ್ಸವ ಕಾರ್ಯಕ್ರಮ ನಡೆಯಿತು. ಪಾಕತಜ್ಞರಾದ ಸನತ್‌ ಕುಮಾರ್‌ ಮತ್ತು ರವಿರಾಜ್‌ ಜೈನ್‌ ರವರನ್ನು ವೀರೇಂದ್ರ ಹೆಗ್ಗಡೆಯವರು ಈ ಸಂದರ್ಭದಲ್ಲಿ ಸನ್ಮಾನಿಸಿದರು. ಬ್ಯಾಂಡ್‌ ವಾಲಗ ಸಹಿತ ಮಹಾಮಂಗಳಾರತಿ ಸಲ್ಲಿಸುವುದರೊಂದಿಗೆ ಸಮವಸರಣ ಪೂಜೆ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *