Sun. Dec 29th, 2024

Ujire: ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ಉಜಿರೆ:(ಡಿ.8) “ಜೀವನದಲ್ಲಿ ಶಿಸ್ತನ್ನು ಮೂಡಿಸಿಕೊಳ್ಳಲು ಕ್ರೀಡೆಯು ಸಹಕಾರಿಯಾಗಿದೆ. ಪರೀಕ್ಷೆಗಳಲ್ಲಿ ಅಂಕಗಳನ್ನು ಪಡೆಯುವುದರ ಮೂಲಕ ಅನೇಕ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆಯಬಹುದು. ಆದರೆ ಕ್ರೀಡೆಯಲ್ಲಿ ಒಬ್ಬ ಮಾತ್ರ ಪ್ರಥಮ ಸ್ಥಾನ ಪಡೆಯಲು ಸಾಧ್ಯ. ಆರೋಗ್ಯಕ್ಕಾಗಿ , ಸ್ಪರ್ಧೆಗಾಗಿ ಹಾಗೂ ಮನೋರಂಜನೆಗಾಗಿ ಕ್ರೀಡೆ ಇದೆ. ಇದನ್ನು ನಾವು ಹೇಗೆ ಹಾಗೂ ಎಷ್ಟು ಸ್ವೀಕರಿಸುತ್ತೇವೆ ಎಂಬುದು ಮುಖ್ಯ. ಶಿಸ್ತಿನಿಂದ ಕ್ರೀಡೆಯಲ್ಲಿ ಭಾಗವಹಿಸಿದರೆ ಗೆಲ್ಲಬಹುದು. ಗೆಲ್ಲದೆ ಸೋತಾಗ ಅನುಭವಗಳನ್ನು ಕೂಡ ಪಡೆಯಬಹುದು.

ಇದನ್ನೂ ಓದಿ: ಮಣಿಪಾಲ: ರುಂಡ ಮುಂಡ ಬೇರ್ಪಟ್ಟಿರುವ ಕೊಳೆತ ಶವ‌ ಪತ್ತೆ

ಒಟ್ಟಾರೆ ಕ್ರೀಡೆಯಿಂದ ಪ್ರತಿಯೊಬ್ಬರ ಜೀವನದಲ್ಲಿ ಪರಿಪೂರ್ಣತೆ ಕಾಣಲು ಸಾಧ್ಯ” ಎಂದು ಕ್ರೀಡಾ ವಿಭಾಗದ ಅಂತಾರಾಷ್ಟ್ರೀಯ ಮಟ್ಟದ ತಾಂತ್ರಿಕ ಅಧಿಕಾರಿ ಹಾಗೂ ಮೇಲಂತಬೆಟ್ಟು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಧಾಕೃಷ್ಣ ಹೆಚ್.ಬಿ ಅವರು ಹೇಳಿದರು.

ಇವರು ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಇವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಅವರು ಮಾತನಾಡಿ ಇಂದು ಇಲ್ಲಿನ ಕ್ರೀಡಾಕೂಟದಲ್ಲಿ ವಿವಿಧತೆಯಲ್ಲಿ ಏಕತೆ ಕಾಣುತ್ತಿದ್ದೇವೆ. ಎಲ್ಲರೂ ಜೀವನದುದ್ದಕ್ಕೂ ಸ್ಪರ್ಧಾ ಮನೋಭಾವನೆ ಬೆಳೆಸಿಕೊಳ್ಳಿ ಹಾಗೂ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದು ಕರೆ ನೀಡಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಹೆಚ್ ಉಪಸ್ಥಿತರಿದ್ದರು.

ರಾಷ್ಟ್ರೀಯ ಕ್ರೀಡಾಪಟುಗಳು ಕ್ರೀಡಾ ಜ್ಯೋತಿಯನ್ನು ಅಭ್ಯಾಗತರ ಮೂಲಕ ಬೆಳಗಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಕ್ರೀಡಾಪಟುಗಳಾದ ಅಪೂರ್ವ , ಲಾಂಛನ ಧನ್ಯಾ ಹಾಗೂ ಅನುಷಾ ಇವರು ಕ್ರೀಡಾಧ್ವಜಕ್ಕೆ ವಂದನೆ ಸಲ್ಲಿಸಿದರು. ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ್ತಿ ಚರಿಷ್ಮಾ ಅವರು ಕ್ರೀಡಾಪಟುಗಳಿಗೆ ಪ್ರಮಾಣ ವಚನ ಬೋಧಿಸಿದರು.

ಇದೇ ಸಂದರ್ಭದಲ್ಲಿ ಆಕರ್ಷಕ ಪಥಸಂಚಲನ ಕಾರ್ಯಕ್ರಮ ನಡೆಯಿತು. ಇದರಲ್ಲಿ ಪ್ರಥಮ ಬಹುಮಾನ ದ್ವಿತೀಯ ವಿಜ್ಞಾನ ‘ಡಿ’ ವಿಭಾಗ , ದ್ವಿತೀಯ ಸ್ಥಾನ ದ್ವಿತೀಯ ವಿಜ್ಞಾನ ‘ಇ’ ಹಾಗೂ ತೃತೀಯ ಬಹುಮಾನವನ್ನು ಪ್ರಥಮ ವಿಜ್ಞಾನ ‘ಡಿ’ ವಿಭಾಗ ಪಡೆದುಕೊಂಡವು.

ಉಪ ಪ್ರಾಚಾರ್ಯ ಡಾ.ರಾಜೇಶ್ ಬಿ ಸ್ವಾಗತಿಸಿ , ದೈಹಿಕ ಶಿಕ್ಷಣ ನಿರ್ದೇಶಕ ಸಂದೇಶ ಪೂಂಜಾ ವಂದಿಸಿದರು. ಕನ್ನಡ ಭಾಷಾ ಉಪನ್ಯಾಸಕ ಮಹಾವೀರ ಜೈನ್ ನಿರೂಪಿಸಿದರು.

Leave a Reply

Your email address will not be published. Required fields are marked *