Fri. Dec 27th, 2024

Ujire: ರೋಟರಿ ಕ್ಲಬ್‌ ವತಿಯಿಂದ “ವಿಶ್ವ ಮಣ್ಣಿನ ದಿನ ಆಚರಣೆ”

ಉಜಿರೆ :(ಡಿ.13) ಮಣ್ಣಿನ ಫಲವತ್ತತೆಯ ಪದರಗಳು ಇಂದು ಹಲವು ಬಗೆಯ ಭೂಮಾಲಿನ್ಯದಿಂದ ಸತ್ವ ಕಳೆದು ಕೊಳ್ಳುತ್ತಿದೆ. ದೇಶದ ಪ್ರತಿಯೊಂದು ಭಾಗದ ಮಣ್ಣಿಗೂ ತನ್ನದೇ ಫಲಭರಿತವಾಗಿ ಇಳುವರಿ ನೀಡುವ ಶಕ್ತಿಯಿದೆ. ಈ ಮಣ್ಣಿನ ಫಲವತ್ತತೆಯ ರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯೆಡೆಗೆ ಸಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಣ್ಣು ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ರಂಜಿತ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಪುತ್ತೂರು: ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಆರೋಪಿಗಳಿಗೆ ಬಿಗ್ ಶಾಕ್..!!!

ಇವರು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಉಜಿರೆ ಎಸ್.ಡಿ.ಎಂ ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಆಯೋಜಿಸಲಾದ ವಿಶ್ವ ಮಣ್ಣಿನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಣ್ಣಿನ ಪರೀಕ್ಷೆ ನಡೆಸುವುದರಿಂದ ಮಣ್ಣಿನ ಮಾದರಿಯ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಧರ್ಮಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಿಸಿ ಆ ಮಣ್ಣಿನ ಆರೋಗ್ಯ ತಿಳಿದುಕೊಳ್ಳಬವುದು. ಇದರಿಂದ ಸಸ್ಯಗಳಿಗೆ ಅವಶ್ಯಕವಿರುವ ಪೋಷಕಾಂಶಗಳು ಯಾವ ಪ್ರಮಾಣದಲ್ಲಿದೆ ಎಂಬುದನ್ನು ನಿರ್ಧರಿಸಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಪ್ರೊ.ವಿಶ್ವನಾಥ್ ಪಿ ಮಾತನಾಡಿ, ದಿವಂಗತ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿದ್ದ ಡಾ.ಯಶೋವರ್ಮರ ಕನಸಿನ ಹಾದಿಯಾಗಿ ಸ್ಥಾಪಿತವಾದ ಎಸ್.ಡಿ.ಎಂ ಮಣ್ಣಿನ ಪರೀಕ್ಷಾ ಕೇಂದ್ರ ಇಂದು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಹೊರ ಜಿಲ್ಲೆಯ ಜನರೂ ಇದರ ಉಪಯೋಗವನ್ನು ಪಡೆಯುತ್ತಿದ್ದಾರೆ. ಇದರಿಂದ ಮಣ್ಣಿನ ಸೂಕ್ಷ್ಮತೆ ಮತ್ತು ಕೃಷಿ ಭೂಮಿಗಾಗುವ ಅನುಕೂಲತೆಯನ್ನು ಮನಗಾಣಬಹುದು ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಣ್ಣಿನ ಪ್ರಯೋಗಾಲಯದ ಕೆಲ ಮಾದರಿಗಳನ್ನು ತೋರಿಸಲಾಯಿತು.ಬಳಿಕ ವಿದ್ಯಾರ್ಥಿಗಳ ಹಲವು ಪ್ರಶ್ನೆಗಳನ್ನು ಚರ್ಚಿಸಲಾಯಿತು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್, ಎಸ್.ಡಿ.ಎಂ ಸೆಕೆಂಡರಿ ಶಾಲೆಯ ಶಿಕ್ಷಕ ಮೋನಪ್ಪ ಪಿ ಮತ್ತು ಎಸ್.ವಿ ನಂದಿತಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅರವಿಂದ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *