ಕಟಪಾಡಿ:(ಡಿ.15) ಕಟಪಾಡಿಯ ಎಸ್ ವಿ ಕೆ/ ಎಸ್ ವಿ ಎಸ್ ಅಂಗ್ಲಮಾಧ್ಯಮ ಪ್ರೌಢ ಶಾಲೆಯ ವಾರ್ಷಿಕ ಕ್ರೀಡಾಕೂಟವು ಎಸ್ ವಿ ಎಸ್ ಕ್ರೀಡಾಂಗಣದಲ್ಲಿ ಜರಗಿತು. ಶಾಲಾ ಸಂಚಾಲಕರಾದ ಶ್ರೀ ಕೆ ಸತ್ಯೇಂದ್ರ ಪೈಯವರು ಧ್ವಜಾರೋಹಣಗೈದು ಶುಭ ಹಾರೈಸಿದರು. ಕಟಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇನಾಯತ್ ಕ್ರೀಡಾಜ್ಯೋತಿ ಬೆಳಗಿಸಿ, ಮಕ್ಕಳು ಕೇವಲ ಪಠ್ಯ ಪುಸ್ತಕಗಳಿಗೆ ಪ್ರಾಮುಖ್ಯತೆ ನೀಡದೆ ಪಠ್ಯೇತರ ಚಟುವಟಿಕೆಗಳಿಗೂ ಸಾಕಷ್ಟು ಪ್ರಾಮುಖ್ಯತೆ ನೀಡಬೇಕೆಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು: ಪತ್ನಿ, ಮಾವನ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಕಾನ್ಸ್ಟೇಬಲ್!!!
ಕಟಪಾಡಿ ಕೆನರಾ ಬ್ಯಾಂಕ್ ಮ್ಯಾನೇಜರ್ ಶ್ರೀ ಲಕ್ಷ್ಮಿಯವರು ಪಥಸಂಚಲನದ ಗೌರವ ರಕ್ಷೆ ಪಡೆದು ಬಲೂನ್ ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ವಿದ್ಯಾರ್ಥಿಗಳ ಪರವಾಗಿ ಶಾರ್ವರಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಸಂದರ್ಭ ಆಡಳಿತ ಮಂಡಳಿ ಸದಸ್ಯರಾದ ಬಿ. ಚಂದ್ರಕಾಂತ್ ಪೈ, ಶ್ರೀನಿವಾಸ ಕಿಣಿ, ಗಣೇಶ್ ಕಿಣಿ, ಶಾಲಾ ಆಡಳಿತ ಅಧಿಕಾರಿ ಸುಧಾಕರ್ ಬ್ರಹ್ಮಾವರ್, ಮುಖ್ಯ ಶಿಕ್ಷಕಿ ಶ್ವೇತಾ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಮೋಹಿನಿ, ಶಿಕ್ಷಕರು ಮತ್ತು ಪೋಷಕರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಫಲಕಗಳನ್ನು ನೀಡಿ ಗೌರವಿಸಲಾಯಿತು. ಶಿಕ್ಷಕಿ ರಕ್ಷಿತಾ ಸ್ವಾಗತಿಸಿದರು ಮತ್ತು ದೈಹಿಕ ಶಿಕ್ಷಣ ಶಿಕ್ಷಕಿ ಜಯಲಕ್ಷ್ಮೀ ವಂದಿಸಿದರು.