Wed. Jan 1st, 2025

Puttur: ತಿರುಪತಿ ತಿರುಮಲದ ಲಡ್ಡು ಪುತ್ತೂರಿನಲ್ಲಿ ಸಿದ್ಧ

ಪುತ್ತೂರು:(ಡಿ.28) ತಿರುಪತಿ ಎಂದಾಕ್ಷಣ ನೆನಪಾಗೋದು ಅಲ್ಲಿನ ಪ್ರಮುಖ ಪ್ರಸಾದವಾದ ಲಡ್ಡು ಪ್ರಸಾದ. ವೆಂಕಟರಮಣ ಸ್ವಾಮಿಯ ಸೇವೆ ಮಾಡಿಸಿವ ಭಕ್ತಾಧಿಗಳು ಈ ಲಡ್ಡು ಪ್ರಸಾದವನ್ನು ಮರೆಯದೇ ಮಾಡೋದು ಸಾಮಾನ್ಯವೇ. ತಿರುಪತಿ ಲಡ್ಡನ್ನು ಮಾಡುವ ಪ್ರಕ್ರಿಯೆಯನ್ನು ನೋಡಲು ಸಿಗೋದು ಅಪರೂಪವೇ.

ಇದನ್ನೂ ಓದಿ: ರಾಮನಗರ: ಮಹಿಳೆಯನ್ನು ಲಾಡ್ಜ್​ಗೆ ಕರೆದೊಯ್ದ ಬಿಜೆಪಿ ಮುಖಂಡ ಅರೆಸ್ಟ್!!!

ಪುತ್ತೂರಿನಲ್ಲಿ ಡಿ.28, 29 ರಂದು ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಹಿನ್ನಲೆಯಲ್ಲಿ ಪುತ್ತೂರಿನಲ್ಲೇ ತಿರುಪತಿ ಲಡ್ಡುಗಳ ತಯಾರಿ ಪ್ರಕ್ರಿಯೆ ಆರಂಭಗೊಂಡಿದೆ. ಶ್ರೀನಿವಾಸ ಸ್ವಾಮಿಯ ಈ ಕಲ್ಯಾಣೋತ್ಸವದಲ್ಲಿ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಭಾಗವಹಿಸುವ ಹಿನ್ನಲೆಯಲ್ಲಿ ಭಕ್ತರಿಗೆ ನೀಡಲು ಸಾವಿರಾರು ಸಂಖ್ಯೆಯ ತಿರುಪತಿ ಲಡ್ಡುಗಳ ತಯಾರಿ ಪ್ರಕ್ರಿಯೆ ಭರದಿಂದ ಸಾಗುತ್ತಿದೆ.

ಪುತ್ತಿಲ ಪರಿವಾರ ಟ್ರಸ್ಟ್ ಮೂಲಕ ಪುತ್ತೂರಿನಲ್ಲಿ ಎರಡನೇ ಬಾರಿಗೆ ಶ್ರೀನಿವಾಸ ಕಲ್ಯಾಣೋತ್ಸವವನ್ನು ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ದೇವರಗದ್ದೆಯಲ್ಲಿ ಆಯೋಜಿಸಲಾಗಿದೆ. ಡಿ.28 ಮತ್ತು 29 ರಂದು ನಡೆಯುವ ಈ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.

ಆಯೋಜಕರ ಪ್ರಕಾರ ಈ ಬಾರಿ ಸುಮಾರು 30 ರಿಂದ 40 ಸಾವಿರ ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ತಿರುಪತಿ ವೆಂಕಟರಮಣ ದೇವರ ಪ್ರಮುಖ ಪ್ರಸಾದವಾದ ಲಡ್ಡುಗಳ ತಯಾರಿಕೆಯನ್ನು ಪುತ್ತೂರಿನಲ್ಲೇ ತಯಾರಿಸಿ ಭಕ್ತರಿಗೆ ಹಂಚಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ತಿರುಪತಿ ತಿರುಮಲ ಕ್ಷೇತ್ರಕ್ಕೆ ಸಂಬಂಧಪಟ್ಟ ತಂಡ ಈ ಶ್ರೀನಿವಾಸ ಕಲ್ಯಾಣೋತ್ಸವವನ್ನು ನಡೆಸಿಕೊಡುತ್ತಿದ್ದು, ಇದೇ ತಂಡಕ್ಕೆ ಸಂಬಂಧಪಟ್ಟ ಅಡುಗೆ ಭಟ್ಟರು ಈ ಲಡ್ಡುಗಳನ್ನು ತಯಾರಿಸಲು ಆರಂಭಿಸಿದ್ದಾರೆ.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪಾಕಶಾಲೆಯಲ್ಲೇ ಈ ಲಡ್ಡುಗಳ ತಯಾರಿ ಪ್ರಕ್ರಿಯೆ ಆರಂಭಗೊಂಡಿದ್ದು, ತಿರುಪತಿ ತಿರುಮಲದಲ್ಲಿ ಯಾವ ರೀತಿಯಲ್ಲಿ ಲಡ್ಡು ತಯಾರಿಸಲಾಗುತ್ತದೋ, ಅದೇ ರೀತಿಯಲ್ಲಿ ಈ ಲಡ್ಡುಗಳನ್ನು ಇಲ್ಲಿಯೂ ತಯಾರಿಸಲಾಗುತ್ತಿದೆ. ತಿರುಪತಿಯಲ್ಲಿ ಲಡ್ಡು ತಯಾರಿಕೆ ಸಂದರ್ಭದಲ್ಲಿ ಬಳಸುವ ಎಲ್ಲಾ ವಸ್ತುಗಳನ್ನು ಇಲ್ಲಿ ತಯಾರಿಸುವ ಲಡ್ಡಿನಲ್ಲೂ ಅಳವಡಿಸಲಾಗುತ್ತಿದ್ದು, ತಿರುಮಲದಲ್ಲಿ ಸಿಗುವ ಲಡ್ಡಿನ ಅದೇ ಸ್ವಾದ ಈ ಲಡ್ಡಿನಲ್ಲೂ ಇರಲಿದೆ. ಸುಮಾರು ನಾಲ್ಕರಿಂದ ಐದು ಅಡಿಗೆ ಭಟ್ಟರು ಶ್ರೀನಿವಾಸ ಕಲ್ಯಾಣೋತ್ಸವಕ್ಕಾಗಿ ಅಂದಾಜು ಮೂವತ್ತು ಸಾವಿರ ಲಡ್ಡುಗಳನ್ನು ತಯಾರಿಸಿದ್ದು, ಈ ಲಡ್ಡುಗಳನ್ನು ಲಡ್ಡು ಪ್ರಸಾದ ಸೇವೆ ಮಾಡಿಸಿದ ಭಕ್ತಾಧಿಗಳಿಗೆ ಹಂಚಲಾಗುತ್ತದೆ.

ಕಳೆದ ವರ್ಷವೂ ಪುತ್ತಿಲ ಪರಿವಾರ ಟ್ರಸ್ಟ್ ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತರ ಬೇಡಿಕೆಯ ಹಿನ್ನಲೆಯಲ್ಲಿ ಈ ಬಾರಿಯೂ ಶ್ರೀನಿವಾಸ ಕಲ್ಯಾಣೋತ್ಸವವನ್ನು ಪುತ್ತೂರಿನ ಭಕ್ತರಿಗೆ ನೋಡುವ ಅವಕಾಶವನ್ನು ಪರಿವಾರ ನೀಡಿದೆ‌.

Leave a Reply

Your email address will not be published. Required fields are marked *