Sun. Jan 5th, 2025

Puttur: ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ

ಪುತ್ತೂರು:(ಡಿ.30) ಶೂರರಾಜ ಪೌತ್ರನಾದ ವಸುದೇವನ ಪುತ್ರ ಶ್ರೀ ವಶಿಷ್ಠ ಗೋತ್ರೋತ್ಪನ್ನನಾದ ಸಾಕ್ಷತ್ ಮನ್ಮಥನಾದ ರಮಾವಲ್ಲಭಾನಾದ, ಭೂವೈಕುಂಠಾಧಿಪತಿ ಶ್ರೀನಿವಾಸ ಹಾಗೂ ಸುಧರ್ಮರಾಜನ ಪೌತ್ರಿಯಾದ ಆಕಾಶರಾಜನ ಪುತ್ರಿಯಾದ ಶ್ರೀ ಅತ್ರಿಗೋತ್ತೋತ್ಪನ್ನಳಾದ ಪದ್ಮಾವತಿಯ ಕಲ್ಯಾಣೋತ್ಸವ ಡಿ.29ರಂದು ಸಂಜೆ ಗೊಧೋಳಿ ಲಗ್ನದಲ್ಲಿ ವಿಜೃಂಭಣೆಯಿಂದ ಮತ್ತು ಭಕ್ತಿ ಪ್ರಧಾನವಾಗಿ ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿ ಭವ್ಯವಾದ ವೇದಿಕೆಯಲ್ಲಿ ನಿರ್ಮಿಸಿದ ತಿರುಪತಿ ಮಾದರಿಯ ಮಂಟಪದಲ್ಲಿ ನಡೆಯಿತು.

ಇದನ್ನೂ ಓದಿ: ಉಜಿರೆ: ಉಜಿರೆ ಎಸ್‌.ಡಿ.ಎಂ. ಸೆಕೆಂಡರಿ ಶಾಲೆ & ರತ್ನಮಾನಸ ವಿದ್ಯಾರ್ಥಿನಿಲಯದಲ್ಲಿ ಪ್ರೌಢಶಿಕ್ಷಣ ಪೂರೈಸಿದ

ಸಂಕಲ್ಪ ಪುಣ್ಯಾಹ, ದೇವನಾಂದಿ, ವರಪೂಜೆ, ವರೋಪಚಾರ ಸಹಿತ ಕಂಕಣಧಾರಣೆ ನಡೆಯಿತು. ಶುಭಗಳಿಗೆಯಲ್ಲಿ ಸಹಸ್ರಾರು ಭಕ್ತರ ಗೋವಿಂದನ ಉದ್ಯೋಷದಲ್ಲಿ ಮಾಂಗಲ್ಯ ಧಾರಣೆ ನಡೆಯಿತು. ಮಹಾಮಂಗಳಾರತಿ ಎತ್ತಿ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು. ತಿರುಪತಿ ಶ್ರೀ ಕ್ಷೇತ್ರ ಮೂಲದ ಲಕ್ಷ್ಮೀಪತಿ ಶರ್ಮ ಅವರ ನೇತೃತ್ವದಲ್ಲಿ ಮತ್ತು ಸುಮಾರು 27 ಮಂದಿ ಆಗಮಿಕರು ಕಲ್ಯಾಣೋತ್ಸವವನ್ನು ನಡೆಸಿಕೊಟ್ಟರು.

ರಾತ್ರಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಕಲ್ಯಾಣೋತ್ಸವಕ್ಕೆ ಆಗಮಿಸಿ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಭಾಗಿಯಾಗಿ ಆಶೀರ್ವಚನ ನೀಡಿದರು.

ಪುತ್ತಿಲ ಪರಿವಾರ ಟ್ರಸ್ಟ್‌ನ ಸಾರಥ್ಯದಲ್ಲಿ ಶ್ರೀನಿವಾಸ ಕಲ್ಯಾಣ ಅತೀ ವೈಭವದಿಂದ ನಡೆಯುತ್ತಿದೆ. ಇದರ ಅಂಗವಾಗಿ ನಿನ್ನೆ ಧರ್ಮ ಸಂಗಮವೂ ನಡೆದಿದೆ. ಭಗವಂತನ ಆದೇಶದಂತೆ ಸತ್ಯ ವಧ, ಧರ್ಮಂ ಚರ. ಧರ್ಮ ಸಂಸ್ಥಾಪನಾಯ ಸಂಭವಾನಿ ಯುಗೆ ಯುಗೆ ಎಂಬಂತೆ ಧರ್ಮ ರಕ್ಷಣೆಗೆ ನಮ್ಮ ಹಿಂದೆ ಭಗವಂತನ ಆಶೀರ್ವಾದ ನಿರಂತರವಾಗಿ ಇದೆ. ಗೋವಿನ ರಕ್ಷಣೆ ನಾವು ಹೇಗೆ ಮಾಡಬೇಕು ಎಂಬುದಕ್ಕೆ ಶ್ರೀನಿವಾಸ ದೇವರೇ ಸ್ಫೂರ್ತಿ. ಶ್ರೀನಿವಾಸ ದೇವರು ಇದ್ದಾರೆಂದು ನಮಗೆ ತೋರಿಸಿಕೊಟ್ಟದ್ದು ಗೋವು. ಧರ್ಮ ರಕ್ಷಣೆಗೆ ಕಟಿಬದ್ದರಾಗಿ ನಾವು ನಿಲ್ಲಬೇಕಾದರೆ ಧರ್ಮದ ಪ್ರತೀಕವಾಗಿರುವಂತಹ ಗೋವಿನ ಸಂರಕ್ಷಣೆಗೆ ನಾವು ನಿಂತರೆ ಶ್ರೀನಿವಾಸ ದೇವರ ಪರಿಪೂರ್ಣ ಅನುಗ್ರಹ ನಮಗೆ ಸಿಗುತ್ತದೆ. ಹಾಗಾಗಿ ಮುಂದಿನ ಕಲ್ಯಾಣೋತ್ಸವದೊಳಗಾಗಿ ಬೃಹತ್ ಗೋ ಶಾಲೆ ನಿರ್ಮಾಣ ಆಗಬೇಕೆಂದು ಸಂಕಲ್ಪ ಮಾಡೋಣ. ದೇವರು ಅದನ್ನು ನಡೆಸಿಕೊಡುತ್ತಾರೆ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಸಂಜೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಶ್ರೀ ಹರಿಗಾನಾಮೃತ ಕಾರ್ಯಕ್ರಮ ನಡೆಯಿತು. ಬಳಿಕ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು.

ರಾತ್ರಿ ಶ್ರೀನಿವಾಸ ಕಲ್ಯಾಣೋತ್ಸವ ಸಂದರ್ಭ ಸುಡುಮದ್ದು ಪ್ರದರ್ಶನ ನಡೆಯಿತು. ಬಾನೆತ್ತರದಲ್ಲಿ ಚಿಮ್ಮಿದ ಸಿಡಿಮದ್ದು ಪ್ರದರ್ಶನ ಬಣ್ಣ ಬಣ್ಣದ ಪ್ರಕಾಶವನ್ನು ಚಿಮ್ಮುತ್ತಿತ್ತು. ಭಕ್ತರು ಸಿಡಿಮದ್ದು ಪ್ರದರ್ಶನ ವೀಕ್ಷಿಸಿದರು. ಸುಮಾರು 20 ನಿಮಿಷಗಳ ಕಾಲ ಸಿಡಿಮದ್ದು ಪ್ರದರ್ಶನ ನಡೆಯಿತು. ಧರೇಶ್ ಹೊಳ್ಳ ಅವರ ನೇತೃತ್ವದಲ್ಲಿ ಹೊಳ್ಳ ಟ್ರ್ಯಾಕರರ್ಸ್ ವತಿಯಿಂದ ಸಿಡಿಮದ್ದು ಪ್ರದರ್ಶನಗೊಂಡಿತು.

ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಭಾಗಿಯಾದ ಪೇಜಾವರ ಶ್ರೀಗಳಿಗೆ ಶ್ರೀನಿವಾಸ ಕಲ್ಯಾಣೋತ್ಸವದ ಪ್ರಸಾದ ರೂಪದಲ್ಲಿ ಅರ್ಚಕರು ಹಾರಾರ್ಪಣೆ ಮಾಡಿದರು. ಶ್ರೀಗಳು ವೇದಿಕೆಯಿಂದ ತೆರಳುವ ಸಂದರ್ಭ ತನಗೆ ದೇವರ ಪ್ರಸಾದ ರೂಪದಲ್ಲಿ ಕೊಟ್ಟ ಹಾರವನ್ನು ಅರುಣ್ ಕುಮಾ‌ರ್ ಪುತ್ತಿಲ ಅವರ ಕೊರಳಿಗೆ ಹಾಕಿ ಆಶೀರ್ವದಿಸಿದರು.

ವೈಷ್ಣವ, ಮಧ್ವ ಪರಂಪರೆಯಂತೆ ಡಿ.29ರಂದು ಪ್ರಾತಃ ಕಾಲ ಸುಪ್ರಭಾತ ಸೇವೆ ನಡೆಯಿತು. ಬಳಿಕ ಪುಷ್ಪಮಾಲಿಕೆ ತೋಮಾಲೆ ಸೇವೆ, ತುಪ್ಪ, ಹಾಲು ಮೊಸರು ಸೇರಿದಂತೆ ವಿಶೇಷ ದ್ರವ್ಯ ಅಭಿಷೇಕ, ಮಂಗಳದ್ರವ್ಯ ಅಭಿಷೇಕವಾಗಿ ತಿರುಮಜ್ಜನಾಭಿಷೇಕ. ಹೋಮ ಕೈಂಕರ್ಯ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಹೋಮದ ಪೂರ್ಣಾಹುತಿ, ಇದೇ ಸಂದರ್ಭ ಶ್ರೀನಿವಾಸ ದೇವರ ಪಾದ ತೊಳೆದ ತೀರ್ಥ ವಿತರಣೆ, ಆ ಬಳಿಕ ಸಂಜೆಯ ತನಕ ದರ್ಬಾರ್ ಅಲಂಕಾರ ನಡೆಯಿತು. ಶ್ರೀನಿವಾಸನ ಸಣ್ಣ ವಿಗ್ರಹದೊಂದಿಗೆ ಕಾಶಿಯಾತ್ರೆ ನಡೆಯಿತು. ಇದರಲ್ಲಿ ಕೋಲಾಟ ನಡೆಯಿತು. ಕಾಶಿಯಾತ್ರೆಯಲ್ಲಿ ಗರುಡಾರೂಢನಾಗಿ ಬಂದು ಮರಳಿ ಕಲ್ಯಾಣೋತ್ಸವಕ್ಕೆ ಕರೆ ತಂದು ಲಗ್ನಪತ್ರಿಕೆ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭ ವಧುನಿರೀಕ್ಷಣೆ(ಮಂಗಳಮುಹೂರ್ತ), ಬಳಿಕ ಕನ್ಯಾದಾನ, ಕಂಕಣಕ್ಕೆ ನಾಗನ ಆಹವಾನೆ, ಮಾಂಗಲ್ಯ ಪೂಜೆ, ಮಾಂಗಲ್ಯ ಧಾರಣೆ, ರಾಜಾ ಹೋಮ, ಅಕ್ಷತಾರೋಹಣ ಸೇವೆ, ನಾದೋಪನಾ ಸೇವೆ, ಶೃಂಗಾರ ಕೀರ್ತನೆಗಳಲ್ಲಿ ಲೀನಾ ವಿನೋದ, ಮಾಲಿಕಾ ರೂಪಣಾ, ಮಾಲಾಧಾರಣೆ ಸೇವೆ, ಉಡುಗೊರೆ ಸೇವೆ, ಮೂರು ಬಾರಿ ನರ್ತನ, ಬೋಗ ಮೂರ್ತಿ ಊಂಜಲ್ ಸೇವೆ, ಅಷ್ಟಾವಧಾನ ಸೇವೆ ನಡೆದು, ಕೊನೆಗೆ ಸ್ವಾಮಿ ಪಾದ ತೊಳೆದ ಜಲ, ಅಕ್ಷತೆ ಮತ್ತು ತಿರುಮಲ ದೇವಸ್ಥಾನದ ಲಡ್ಡು ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು.

ವೇದಿಕೆಯಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉಪಸ್ಥಿತರಿದ್ದರು.

ಸಭೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಸುರೇಶ್ ಪುತ್ತೂರಾಯ, ಶಶಾಂಕ ಕೊಟೇಚಾ, ಚಂದಪ್ಪ ಮೂಲ್ಯ, ಬೂಡಿಯಾರು ರಾಧಾಕೃಷ್ಣ ರೈ ಸಹಿತ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪದಾಧಿಕಾರಿಗಳು,ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬಿಜೆಪಿ ಪ್ರಮುಖರಾದ ಹರಿಪ್ರಸಾದ್ ಯಾದವ್, ಹರೀಶ್ ಬಿಜತ್ರೆ, ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *