Tue. Jan 7th, 2025

Ujire: ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಸೇವಾನಿವೃತ್ತರಿಗೆ ಬೀಳ್ಕೊಡುಗೆ ಸಮಾರಂಭ

ಉಜಿರೆ (ಜ. 3): ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ಅಧ್ಯಾಪಕರ ಸಂಘದ ವತಿಯಿಂದ ಡಿ. 31ರಂದು ಸೇವಾನಿವೃತ್ತರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಉಪ ಪ್ರಾಂಶುಪಾಲ ಹಾಗೂ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಶಶಿಶೇಖರ ಎನ್. ಕಾಕತ್ಕರ್ ಮತ್ತು ಗ್ರಂಥಾಲಯ ಸಹಾಯಕ ತುಕಾರಾಮ ಅವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ: ಕೇರಳ: ಕೇರಳದ ನರ್ಸ್‌ ನಿಮಿಷಾ ಪ್ರಿಯಾಗೆ ಯೆಮನ್‌ನಲ್ಲಿ ಮರಣದಂಡನೆ.. !!

ಸನ್ಮಾನಿಸಿ ಮಾತನಾಡಿದ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., “ಕಾಕತ್ಕರ್ ಅವರ ಅನುಭವ ಹಾಗೂ ಬದ್ಧತೆ ಭೌತಶಾಸ್ತ್ರ ವಿಭಾಗಕ್ಕೆ ಭದ್ರ ಬುನಾದಿ ಒದಗಿಸಿದೆ. ಆಡಳಿತಾತ್ಮಕವಾಗಿಯೂ ಅವರ ಸೇವೆ ಮಹತ್ತರ ಕೊಡುಗೆ ನೀಡಿದೆ. ಹೊಸ ತಲೆಮಾರಿನವರು ಅವರಿಂದ ಕಲಿಯುವುದು ಬಹಳಷ್ಟಿದೆ” ಎಂದರು.

ತುಕಾರಾಮ ಅವರೂ ತಮ್ಮ ಅನುಭವ ಹಾಗೂ ಶಿಸ್ತುಬದ್ಧ ಕಾರ್ಯವೈಖರಿಯಿಂದ ಗ್ರಂಥಾಲಯದ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ ಎಂದು ಅವರು ಶ್ಲಾಘಿಸಿದರು.

ಕಾಕತ್ಕರ್ ಅವರು ಮಾತನಾಡಿ, ವೃತ್ತಿ ಜೀವನದ ವಿಶೇಷ ಸಂದರ್ಭಗಳನ್ನು ಹಂಚಿಕೊಂಡರು. ಅಧ್ಯಾಪನಕ್ಕೆ ಮೂರು ಕಡೆ ಅವಕಾಶ ತೆರೆದಿದ್ದರೂ ತಾನು ಕಲಿತ ಎಸ್.ಡಿ.ಎಂ. ಕಾಲೇಜಿನಲ್ಲಿಯೇ ವೃತ್ತಿ ಜೀವನ ಆರಂಭಿಸಿದ್ದು, ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ತೃಪ್ತಿ ಇದೆ ಎಂದರು.

ಉನ್ನತ ಶಿಕ್ಷಣದಲ್ಲಿ ಸ್ಥಿತ್ಯಂತರದ ಕಾಲದಲ್ಲಿ ಅಧ್ಯಾಪಕರು ಮಾನಸಿಕವಾಗಿ ಸಿದ್ಧರಾಗಬೇಕು ಎಂದು ಅವರು ಸಲಹೆ ನೀಡಿದರು.

ತುಕಾರಾಮ ಅವರು ಮಾತನಾಡಿದರು. “ಪ್ರಾಮಾಣಿಕವಾಗಿ ಜವಾಬ್ದಾರಿಗಳನ್ನು ನಿರ್ವಹಿಸಲು ಪ್ರಯತ್ನಿಸಿದ್ದೇನೆ. ಗ್ರಂಥಾಲಯದ ಬೆಳವಣಿಗೆ ಬಗ್ಗೆ ಖುಷಿ ಇದೆ. ಪ್ರಾಂಶುಪಾಲರಾಗಿದ್ದ ಡಾ. ಬಿ. ಯಶೋವರ್ಮ ಅವರು ನನ್ನ ಮೇಲೆ ವಿಶೇಷ ನಂಬಿಕೆ ಇಟ್ಟಿದ್ದರು. ಸಾರ್ಥಕ ಸೇವೆಯ ತೃಪ್ತಿ ಇದೆ” ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, “ಕಾಕತ್ಕರ್ ಅವರು ಶಿಸ್ತು, ಸಂಯಮ ಮತ್ತು ಸರಳ ವ್ಯಕ್ತಿತ್ವದಿಂದ ಸದಾ ನೆನಪಿನಲ್ಲಿರುತ್ತಾರೆ. ಕೆಲಸದಲ್ಲಿ ಶ್ರದ್ಧೆ, ಅಚ್ಚುಕಟ್ಟುತನ, ಬೋಧನಾ ವಿಷಯ ಕುರಿತಂತೆ ಜ್ಞಾನದಿಂದ ಅವರು ವಿದ್ಯಾರ್ಥಿಗಳ ಗೌರವಕ್ಕೆ ಪಾತ್ರರಾಗಿದ್ದಾರೆ. ತುಕಾರಾಮ ಅವರೂ ಕೂಡ ಪ್ರಾಮಾಣಿಕ ಸೇವೆಯನ್ನು ಸಂಸ್ಥೆಗೆ ನೀಡಿದ್ದಾರೆ” ಎಂದರು.

ನಿವೃತ್ತರ ಪರವಾಗಿ ಕಾಲೇಜಿನ ಆಡಳಿತಾಂಗ ಕುಲಸಚಿವೆ ಡಾ. ಶಲೀಪ್ ಕುಮಾರಿ, ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ., ಭೌತಶಾಸ್ತ್ರ ಅಧ್ಯಾಪಕಿ ಅಪೇಕ್ಷಾ, ಅಕೌಂಟ್ಸ್ ಸುಪರಿಂಟೆಂಡೆಂಟ್ ದಿವಾಕರ ಪಟವರ್ಧನ್ ಅನಿಸಿಕೆ ಹಂಚಿಕೊಂಡರು.

ಅಧ್ಯಾಪಕರ ಸಂಘದ ಕಾರ್ಯದರ್ಶಿ ಡಾ. ಸವಿತಾ ಕುಮಾರಿ ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕ ನಾಗಣ್ಣ ಡಿ.ಎ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *