Tue. Jan 7th, 2025

Ujire: ಎಸ್.ಡಿ.ಎಂ ಕಾಲೇಜಿನಲ್ಲಿ ಪ್ರತಿಭಾ ದಿನೋತ್ಸವಕ್ಕೆ ಚಾಲನೆ

ಉಜಿರೆ,(ಜ.3) : ಶ್ರೇಷ್ಠ ಗುಣಮಟ್ಟದ ಪ್ರತಿಭಾ ಪ್ರದರ್ಶನದ ಕಡೆಗಿನ ಗಮನದಿಂದ ಸ್ಪರ್ಧೆಗಳಲ್ಲಿ ಗೆಲುವಿನ ಹಾದಿ ಸುಗಮವಾಗುತ್ತದೆ ಎಂದು ಖ್ಯಾತ ಗಾಯಕ, ಎಸ್.ಡಿ.ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿ ರಜತ್ ಮಯ್ಯ ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಉಜಿರೆ: ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಸೇವಾನಿವೃತ್ತರಿಗೆ ಬೀಳ್ಕೊಡುಗೆ ಸಮಾರಂಭ

ಎಸ್.ಡಿ.ಎಂ ಕಾಲೇಜಿನ ಅಂತರ್ ತರಗತಿ ಸ್ಪರ್ಧೆಗಳನ್ನೊಳಗೊಂಡ ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ಪ್ರತಿಭಾ ದಿನೋತ್ಸವಕ್ಕೆ ಇಂದ್ರಪ್ರಸ್ಥ ಸಭಾಂಗಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.


ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಾಗ ಸ್ಪರ್ಧೆ ಹೇಗಿರುತ್ತದೋ ಎಂದು ಊಹಿಸಿ ಹೆಚ್ಚು ಚಿಂತಿಸಬಾರದು. ಶ್ರೇಷ್ಠ ಗುಣಮಟ್ಟದ ಪ್ರತಿಭಾ ಪ್ರದರ್ಶನದ ಕಡೆಗೇ ಹೆಚ್ಚಿನ ಗಮನವಿರಬೇಕು. ಆ ಬಗೆಯ ಗಮನವು ಸ್ಪರ್ಧೆಯ ಸವಾಲನ್ನು ಎದುರಿಸುವ ಶಕ್ತಿ ನೀಡುತ್ತದೆ. ಗೆಲುವು ಸಾಧ್ಯವಾಗಿಸುವ ಉತ್ಕೃಷ್ಟ ಪ್ರತಿಭಾ ಅಭಿವ್ಯಕ್ತಿಗೆ ಸಹಾಯಕವಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಹಿಂದಿ ಸಿನಿಮಾಗಳ ಗೀತೆಗಳನ್ನು ಹಾಡಿ ರಂಜಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎ.ಕುಮಾರ ಹೆಗ್ಡೆ ಮಾತನಾಡಿದರು. ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉತ್ಸಾಹದೊಂದಿಗೆ ಪ್ರತಿಭಾನ್ವಿತ ಹೆಜ್ಜೆಗಳನ್ನು ಕ್ರಮಿಸಿ ವ್ಯಕ್ತಿತ್ವದ ಬೆಳವಣಿಗೆಯ ಹಾದಿಯನ್ನು ಕಂಡುಕೊಳ್ಳಬೇಕು ಎಂದರು.

ತೊಡಗಿಸಿಕೊಳ್ಳುವ ಹುಮ್ಮಸ್ಸು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಹಿಂಜರಿಕೆಯ ಮನೋಭಾವ ತೊರೆದು ಮುನ್ನುಗ್ಗುವ ಛಲವನ್ನು ಹುಟ್ಟಿಸುತ್ತದೆ. ಆಗ ವ್ಯಕ್ತಿತ್ವದ ವಿಕಾಸದ ದಾರಿಗಳು ತೆರೆದುಕೊಳ್ಳುತ್ತವೆ. ಈ ಸೂಕ್ಷ್ಮತೆಯನ್ನು ಅರಿತುಕೊಂಡು ವಿದ್ಯಾರ್ಥಿಗಳು ತಮ್ಮೊಳಗಿನ ಪ್ರತಿಭಾ ಸಾಮಥ್ರ್ಯಕ್ಕೆ ಅನುಗುಣವಾದ ಅವಕಾಶಗಳನ್ನು ಸಕಾಲಿಕವಾಗಿ ಬಳಸಿಕೊಳ್ಳುವ ಆಸಕ್ತಿ ತೋರಬೇಕು ಎಂದು ಸಲಹೆ ನೀಡಿದರು.

ಕನ್ನಡ ಸಿನಿಮಾ ಗೀತೆಗಳು ಸಂಗೀತದ ಅಭಿರುಚಿಯನ್ನು ಮೂಡಿಸುವುದರ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಮಾರ್ಗದರ್ಶನವನ್ನೂ ತೋರಿವೆ. ಮುನ್ನುಗ್ಗಿ ಯಶಸ್ಸು ಕಂಡುಕೊಳ್ಳುವ ಸಾಧ್ಯತೆಗಳನ್ನು ವಿವಿಧ ರೀತಿಗಳಲ್ಲಿ ಮನಗಾಣಿಸಿವೆ. ಅವುಗಳ ಪ್ರೇರಣೆಯೊಂದಿಗೆ ಪ್ರತಿಭಾನ್ವಿತ ಶಕ್ತಿಯನ್ನು ಅಭಿವ್ಯಕ್ತಿಸಬೇಕು. ಹೊಸ ಬಗೆಯ ಸಾಧನೆಯನ್ನು ಸಾಧ್ಯವಾಗಿಸಿಕೊಳ್ಳಬೇಕು ಎಂದರು.

ಪಠ್ಯೇತರ ಚಟುವಟಿಕೆಗಳ ಸಮಿತಿಯ ಸಂಯೋಜಕರಾದ ಡಾ.ಸುಧೀರ್ ಕೆ.ವಿ. ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಪ್ರತಿಭಾ ದಿನೋತ್ಸವದ ತೀರ್ಪುಗಾರರಾದ ರಂಗ ಕಲಾವಿದ ಜಯರಾಮ್ ಮುಂಡಾಜೆ, ನೀನಾಸಂ ಕಲಾವಿದೆ ಸಂಗೀತಾ, ಎಸ್.ಡಿ.ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿ ಚಂದ್ರಹಾಸ ಬಳಂಜ ಉಪಸ್ಥಿತರಿದ್ದರು. ಡಾ.ನಾಗಣ್ಣ ವಂದಿಸಿದರು.

Leave a Reply

Your email address will not be published. Required fields are marked *