ಚಾಮರಾಜನಗರ, (ಜ.6): ಶಿಕ್ಷಕಿಗೆ ನೋಟ್ಸ್ ತೋರಿಸುವಾಗ ಏಕಾಏಕಿ ಕುಸಿದುಬಿದ್ದು ಮೂರನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟಿರುವ ಆಘಾತಕಾರಿ ಘಟನೆ ಚಾಮರಾಜನಗರದ ಸೇಂಟ್ ಫ್ರಾನ್ಸಿಸ್ ಶಾಲೆಯಲ್ಲಿ ನಡೆದಿದೆ. ಚಾಮರಾಜನಗರ ತಾಲೂಕಿನ ಬದನಗುಪ್ಪೆ ಗ್ರಾಮದ ನಿವಾಸಿ ಲಿಂಗರಾಜು, ಶ್ರುತಿ ದಂಪತಿಯ ಏಕೈಕ ಪುತ್ರಿ ತೇಜಸ್ವಿನಿ ಇಂದು ಎಂದಿನಂತೆ ಶಾಲೆಗೆ ಹೋಗಿದ್ದು, ಕ್ಲಾಸ್ನಲ್ಲಿ ಶಿಕ್ಷಕಿಗೆ ನೋಟ್ಸ್ ತೋರಿಸಲು ನಿಂತಾಗ ಏಕಾಏಕಿ ಕುಸಿದುಬಿದ್ದು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ.
ತರಗತಿಯಲ್ಲಿ ಶಿಕ್ಷಕಿಗೆ ನೋಟ್ಸ್ ತೋರಿಸುವಾಗ ಕುಸಿದುಬಿದ್ದಿದ್ದಾಳೆ. ಆಗ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾಳೆ. ಕೂಡಲೇ ತೇಜಸ್ವಿನಿಯನ್ನು ಶಾಲಾ ಸಿಬ್ಬಂದಿ ಜೆಎಸ್ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ, ದುರದೃಷ್ಟವಶಾತ್ ಅಷ್ಟರಾಗಲೇ ತೇಜಸ್ವಿನಿ ಉಸಿರು ನಿಂತಿದೆ. ಇನ್ನು ತೇಜಸ್ವಿನಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.
ಇಂತಹದೊಂದು ಪ್ರಕರಣ ಈಗ ಕರ್ನಾಟಕದಲ್ಲಿ ನಡೆದಿದ್ದು, ಶಾಲೆಗೆ ಹೋಗಿದ್ದ ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಇದ್ದ ಏಕೈಕ ಪುತ್ರಿಯನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ನೋಡುಗರ ದುಃಖ ಮಡುಗಟ್ಟಿದ್ದು, ಶಾಲೆಯಲ್ಲಿ ಶೋಕ ಆವರಿಸಿದೆ.
ಶಾಲೆಯ ಮುಖ್ಯೋಪಾಧ್ಯಾಯ ಹೇಳಿದ್ದೇನು?
ಎಂದಿನಂತೆ ಇಂದು ವಿದ್ಯಾರ್ಥಿನಿ ತೇಜಸ್ವಿನಿ ಬಂದಿದ್ದಾರೆ. ಎರಡು ಪಿರಿಯಡ್ ಆದ ಬಳಿಕ ಶಾರ್ಟ್ ಬ್ರೇಕ್ ಇತ್ತು. ಈ ಸಮಯದಲ್ಲಿ ಕೈಯಲ್ಲಿ ನೋಟ್ ಬುಕ್ ಹಿಡಿದು ತೇಜಸ್ವಿನಿ ಆಚೆ ಬಂದಿದ್ದಾಳೆ. ಆಗ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಯಲ್ಲಿ ಚೆಸ್ಟ್ ಮಸಾಜ್ ಇಸಿಜಿ ಮಾಡಿಸಿದ್ದೇವೆ. ಆದ್ರೆ, ಹೃದಯಾಘಾತದಿಂದ ತೇಜಸ್ವಿನಿ ಸಾವನ್ನಪ್ಪಿರುವುದಾಗಿ ವೈದ್ಯರು ಸ್ಪಷ್ಟನೆ ನೀಡಿದ್ದಾರೆ. ಈಗಾಗಲೇ ಪೋಷಕರಿಗೆ ಮಾಹಿತಿ ನೀಡಿದ್ದೇವೆ . ಪೋಷಕರು ಪೋಸ್ಟ್ ಮಾರ್ಟಂಗೆ ಒಪ್ಪಲಿಲ್ಲ. ಸದ್ಯ ಬದನಗುಪ್ಪೆಯ ನಿವಾಸಕ್ಕೆ ಮೃತದೇಹ ಕಳುಹಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.