ಉಜಿರೆ (ಜ.10) : ಎಲ್ಲಾ ರೀತಿಯ ಸೃಜನಶೀಲ ಬರವಣಿಗೆಗೆ ಕಲ್ಪನೆಯು ಅಡಿಪಾಯವಾಗಿರುತ್ತದೆ ಹಾಗೂ ಸೃಜನಶೀಲ ಬರವಣಿಗೆಯು ದೈನಂದಿನ ಒತ್ತಡದ ಜೀವನಕ್ಕೆ ಪೂರಕವಾಗಿದೆ ಎಂದು ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹೇಳಿದರು.
ಇದನ್ನೂ ಓದಿ: ದೆಹಲಿ: ದೆಹಲಿ ಶಾಲೆಗಳಿಗೆ ಬಾಂಬ್ ಬೆದರಿಕೆ
ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಇಂದು (ಜ. 9) ಇಂಗ್ಲಿಷ್ ವಿಭಾಗ (ಸ್ನಾತಕ, ಸ್ನಾತಕೋತ್ತರ) ಆಯೋಜಿಸಿದ ‘ಕಾಲ್ಪನಿಕ ಬರವಣಿಗೆ: ಅನುವಾದ ಮತ್ತು ಪ್ರದರ್ಶನ’ (Fictional Writing: Translations and Performances) ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
“ಅನುವಾದವು ಕೇವಲ ಪದಗಳನ್ನು ಅನುವಾದಿಸುವುದಲ್ಲದೆ ಅದನ್ನು ಮೀರಿ ನಮ್ಮ ಸಂಸ್ಕೃತಿ, ಜೀವನಶೈಲಿ, ಸಂಪ್ರದಾಯವನ್ನು ಪರಿಚಯಿಸುವ ಕಾರ್ಯ ನಿರ್ವಹಿಸುತ್ತದೆ. ಸಾಂಸ್ಕೃತಿಕ ಜಗತ್ತನ್ನೇ ಬೆಸೆಯುವ ಶಕ್ತಿ ಕಾಲ್ಪನಿಕ ಬರವಣಿಗೆಗಿದೆ” ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ, ಅನುವಾದವು ಸಾಂಸ್ಕೃತಿಕ ಸಾಮರಸ್ಯವನ್ನು ಬೆಸೆಯುವುದಲ್ಲದೆ ಜಾಗತೀಕರಣದ ಪ್ರಕ್ರಿಯೆಗೂ ವಿಶೇಷವಾಗಿ ಸಹಾಯ ಮಾಡುತ್ತದೆ. ಅನುವಾದವು ಸಂವಹನವನ್ನು ಅಭಿವೃದ್ಧಿಪಡಿಸಲು ನೆರವಾಗುತ್ತದೆ ಎಂದರು.
ಜನರನ್ನು ಹೆಚ್ಚು ಗಮನಿಸುವುದರಿಂದ ಸೃಜನಶೀಲ ಬರವಣಿಗೆಗೆ ಉತ್ತಮ ಉಪಾಯವನ್ನು ಕಂಡುಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಎಸ್.ಡಿ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿ, ಗೋವಾ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀಪಾದ ಭಟ್ ಹಾಗೂ ಕುಮಟಾದ ಕಮಲ ಬಾಳಿಗ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಮತ್ತು ಖ್ಯಾತ ಬರಹಗಾರ ಡಾ. ಶ್ರೀಧರ ಬಳಗಾರ ಅವರನ್ನು ಸನ್ಮಾನಿಸಲಾಯಿತು.
ಎಸ್ ಡಿ ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ., ಕಾರ್ಯಕ್ರಮ ಸಂಯೋಜಕ ಸೂರ್ಯನಾರಾಯಣ ಭಟ್ ಹಾಗೂ ವಿವಿಧ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶ್ರೀಧೃತಿ ಮತ್ತು ತಂಡದವರು ಪ್ರಾರ್ಥಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಜಾನನ ಆರ್. ಭಟ್ ಸ್ವಾಗತಿಸಿದರು. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ. ಮಂಜುಶ್ರೀ ಆರ್. ವಂದಿಸಿದರು. ಅಧ್ಯಾಪಕರಾದ ವಿಘ್ನೇಶ್ ಐತಾಳ್ ಹಾಗೂ ಶುಭರಾಣಿ ನಿರೂಪಿಸಿದರು.