ಬೆಂಗಳೂರು (ಜ.12): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದುರುಳರು ಅಟ್ಟಹಾಸ ಮೆರೆದಿದ್ದಾರೆ. ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ. ಚಾಮರಾಜಪೇಟೆಯ ಓಲ್ಡ್ ಪೆನ್ಷನ್ ಮೊಹಲ್ಲಾದಲ್ಲಿ ತಡ ರಾತ್ರಿ ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ರಕ್ತದ ಕೋಡಿಯನ್ನೇ ಹರಿಸಿರುವ ಘಟನೆ ನಡೆದಿದೆ. ರಸ್ತೆಯಲ್ಲಿ ಮಲಗಿದ್ದ ಹಸುಗಳ ಕೆಚ್ಚಲನ್ನು ಕೊಯ್ದು ಕಿರಾತಕರು ಪರಾರಿಯಾಗಿದ್ದು, ಜನವರಿ 12 ರಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಸದ್ಯ ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಹಾಸನ: ವಿಡಿಯೋ ಮಾಡಿ ಪ್ರಾಣ ಬಿಟ್ಟ ಯುವಕ..!
ಚಾಮರಾಜಪೇಟೆಯ ಕರ್ಣ ಎಂಬುವವರಿಗೆ ಸೇರಿದ ಹಸುಗಳ ಮೇಲೆ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ಒಟ್ಟು 8 ಹಸುಗಳನ್ನು ಸಾಕಿರುವ ಕರ್ಣ ಪ್ರತಿ ದಿನ ಆರೈಕೆ ಮಾಡುತ್ತಾರೆ. ಈ ಪೈಕಿ ಮೂರ ರಿಂದ ನಾಲ್ಕು ಹಸುಗಳು ಮನೆಯಿಂದ ಕೆಲವೇ ದೂರದಲ್ಲಿರುವ ರಸ್ತೆಯಲ್ಲಿ ಮಲಗುತ್ತದೆ. ಹೀಗೆ ನಿನ್ನೆ ಮಲಗಿದ್ದ ಹಸುಗಳ ಕೆಚ್ಚಲನ್ನು ತಡರಾತ್ರಿ ಕಿಡಿಗೇಡಿಗಳು ಕೊಯ್ದಿದ್ದಾರೆ. ಮೂಕ ಪ್ರಾಣಿಗಳ ನರಳಾಟ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಕಾಟನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದಿರುವ ಪೊಲೀಸರು, ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ವೇಳೆ ಘಟನಾ ಸ್ಥಳಕ್ಕೆ ಸಂಸದ ಪಿಸಿ ಮೋಹನ್ ಭೇಟಿ ನೀಡಿದ್ದಾರೆ.
ಮೂಕ ಪ್ರಾಣಿಗಳ ಕೆಚ್ಚಲು ಕೊಯ್ದ ಘಟನೆ ವಿರುದ್ಧ ಸ್ಥಳೀಯರು ಆಕ್ರೋಶಗೊಂಡಿದ್ದು, ಸ್ಥಳಕ್ಕೆ ಬಿಜೆಪಿ ಸಂಸದ ಪಿಸಿ ಮೋಹನ್ ಭೇಟಿ ನೀಡಿದ್ದಾರೆ. ಇನ್ನು ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ 20ಕ್ಕೂ ಹೆಚ್ಚು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ಭಾಗದಲ್ಲಿ ಡ್ರಗ್ಸ್, ಗಾಂಜಾ ಸೇವನೆ ಹೆಚ್ಚಿದ್ದರೂ ಪೊಲೀಸರು ಇದಕ್ಕೆ ಕಡಿವಾಣ ಹಾಕುತ್ತಿಲ್ಲ ಎಂದು ದೂರಿದ್ದಾರೆ.
ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು. ಅಲ್ಲಿಯವರೆಗೂ ಸ್ಥಳದಿಂದ ಹೋಗಲ್ಲ. ವಿರೋಧ ಪಕ್ಷದ ನಾಯಕರು ಈಗ ಸ್ಥಳಕ್ಕೆ ಬರುತ್ತಾರೆ. ಇಲ್ಲಿ ಹಸುವಿನ ಆಸ್ಪತ್ರೆಯಿತ್ತು. ಅದನ್ನು ಮುಚ್ಚಲು ಮುಂದಾಗಿದ್ದರು. ಆದ್ರೆ, ಇದನ್ನು ಹಸುವಿನ ಮಾಲೀಕ ಕರ್ಣ ವಿರೋಧಿಸಿದ್ದ. ಅದಕ್ಕೆ ಈ ರೀತಿಯ ಕೃತ್ಯ ಎಸಗಿದ್ದಾರೆ ಎಂದು ಪಿಸಿ ಮೋಹನ್ ಆರೋಪಿಸಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ವಿಪಕ್ಷ ನಾಯಕರ ಆರ್ ಅಶೋಕ್ ಸಹ ಭೇಟಿ ನೀಡಲಿದ್ದಾರೆ. ಹೀಗಾಗಿ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಳಕ್ಕೆ ಚಿಕ್ಕಪೇಟೆ ಎಸಿಪಿ ರಮೇಶ್ ದೌಡಾಯಿಸಿದ್ದಾರೆ.