Wed. Jan 15th, 2025

Team India: ಟೀಮ್ ಇಂಡಿಯಾ ಆಟಗಾರರ ಪತ್ನಿಯರಿಗೆ ಬಿಗ್ ಶಾಕ್ ನೀಡಿದ ಬಿಸಿಸಿಐ!!! – ಏನದು?

Team India:(ಜ.15) ಭಾರತ ತಂಡದ ಕಳಪೆ ಪ್ರದರ್ಶನದ ಬೆನ್ನಲ್ಲೇ ಬಿಸಿಸಿಐ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ತವರಿನಲ್ಲಿ ನ್ಯೂಝಿಲೆಂಡ್ ವಿರುದ್ಧ 3-0 ಅಂತರದಿಂದ ಹೀನಾಯ ಸೋಲನುಭವಿಸಿದ್ದ ಟೀಮ್ ಇಂಡಿಯಾ, ಆ ಬಳಿಕ ಆಸ್ಟ್ರೇಲಿಯಾದಲ್ಲೂ ಟೆಸ್ಟ್​ ಸರಣಿ ಸೋತಿದೆ. ಈ ಸೋಲುಗಳ ಬೆನ್ನಲ್ಲೇ ಈ ಹಿಂದೆಯಿದ್ದ ಕೆಲ ನಿಯಮಗಳನ್ನು ಮತ್ತೆ ಜಾರಿಗೊಳಿಸಲು ಬಿಸಿಸಿಐ ಮುಂದಾಗಿದೆ.

ಇದನ್ನೂ ಓದಿ: ಬೆಳ್ತಂಗಡಿ : ಕಲ್ಮಂಜ ಗ್ರಾಮದ ಗೋವಿಂದರವರ ತೋಟಕ್ಕೆ ನುಗ್ಗಿದ ಕಾಡಾನೆ

ಪರಿಶೀಲನಾ ಸಭೆಯಲ್ಲಿ ಚರ್ಚಿಸಲಾದ ಪ್ರಸ್ತಾಪದ ಮಾಹಿತಿ ಪ್ರಕಾರ, ಮುಂಬರುವ ಸರಣಿಗಳ ವೇಳೆ ಟೀಮ್ ಇಂಡಿಯಾ ಆಟಗಾರರ ಪತ್ನಿಯರು ಇಡೀ ಸರಣಿಯಲ್ಲಿ ಜೊತೆಗಿರುವಂತಿಲ್ಲ. ಅಂದರೆ ಪತ್ನಿಯರು ಮತ್ತು ಕುಟುಂಬ ಸದಸ್ಯರು ಪ್ರವಾಸದ ಸಂಪೂರ್ಣ ಅವಧಿಯಲ್ಲಿ ತಂಡದೊಂದಿಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದಿಲ್ಲ.

45 ದಿನಗಳ ಸರಣಿಯಾಗಿದ್ದರೆ ಎರಡು ವಾರಗಳ ಕಾಲ ಜೊತೆಯಾಗಿ ಉಳಿಯಬಹುದು. ಅಲ್ಲದೆ ಅಲ್ಪಾವಧಿಯ ಸರಣಿಗಳ ವೇಳೆ ಪತ್ನಿಯರು/ಕುಟುಂಬಸ್ಥರು ಜೊತೆಗಿರಬೇಕಾದ ಮಿತಿಯನ್ನು 7 ದಿನಗಳ ಕಾಲಕ್ಕೆ ಸೀಮಿತಗೊಳಿಸಲಾಗುತ್ತದೆ.

ಈ ಹಿಂದೆ ಇಂತಹದೊಂದು ನಿಯಮ ಜಾರಿಯಲ್ಲಿತ್ತು. ಆದರೆ ಕೊರೋನಾ ಸಂದರ್ಭದಲ್ಲಿ ಆಟಗಾರರು ಬಯೋಬಬಲ್​ನಲ್ಲಿ ಹಾಯಾಗಿರುವಂತೆ ಮಾಡಲು ನಿಯಮಗಳನ್ನು ಸಡಿಲಗೊಳಿಸಲಾಯಿತು. ಇದೀಗ ಮತ್ತೆ ಹಳೆಯ ನಿಯಮಗಳನ್ನು ಜಾರಿಗೊಳಿಸಲು ಬಿಸಿಸಿಐ ಮುಂದಾಗಿದೆ.

ಹೀಗಾಗಿ ಮುಂಬರುವ ಭಾರತ ತಂಡದ ಸರಣಿ ಅಥವಾ ಟೂರ್ನಿಗಳ ವೇಳೆ ಟೀಮ್ ಇಂಡಿಯಾ ಆಟಗಾರರ ಪತ್ನಿಯರು ಸಂಪೂರ್ಣ ಅವಧಿವರೆಗೆ ಜೊತೆಗಿರುವಂತಿಲ್ಲ. ಇಲ್ಲಿ ಕನಿಷ್ಠ 7 ದಿನಗಳ ಕಾಲ ಹಾಗೂ ಗರಿಷ್ಠ 14 ದಿನಗಳ ಕಾಲ ಮಿತಿಯನ್ನು ನಿಗದಿ ಪಡಿಸಲು ನಿರ್ಧರಿಸಲಾಗಿದೆ.

ಒಂದೇ ಬಸ್​ನಲ್ಲಿ ಎಲ್ಲರ ಪ್ರಯಾಣ:
ಟೀಮ್ ಇಂಡಿಯಾ ಆಟಗಾರರು ಒಂದೇ ಬಸ್​ನಲ್ಲಿ ಪ್ರಯಾಣಿಸಬೇಕೆಂಬ ನಿಯಮವನ್ನು ಸಹ ಜಾರಿಗೊಳಿಸಲಾಗುತ್ತಿದೆ. ಈ ಹಿಂದೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಕೆಲ ಸ್ಟಾರ್ ಆಟಗಾರರಿಗೆ ವಿಶೇಷ ಸವಲತ್ತುಗಳನ್ನು ಕಲ್ಪಿಸಲಾಗಿತ್ತು.

ಪ್ರತಿಯೊಬ್ಬ ಆಟಗಾರನು ತಂಡದ ಬಸ್‌ನಲ್ಲೇ ಪ್ರಯಾಣಿಸಬೇಕೆಂದು, ಪ್ರತ್ಯೇಕ ಪ್ರಯಾಣವನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಈ ಮೂಲಕ ಟೀಮ್ ಇಂಡಿಯಾ ಆಟಗಾರರನ್ನು ಹದ್ದುಬಸ್ತಿನಲ್ಲಿಡಲು ಬಿಸಿಸಿಐ ಮುಂದಾಗಿದ್ದು, ಇದರ ಮೊದಲ ಹೆಜ್ಜೆಯಾಗಿ ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತಿದೆ.

Leave a Reply

Your email address will not be published. Required fields are marked *