ಉಡುಪಿ :(ಜ.17) ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಆಕೆಯ ಅಶ್ಲೀಲ ಭಾವಚಿತ್ರ ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಮಾಡಿರುವ ಪ್ರಕರಣದ ಆರೋಪಿಗೆ ಉಡುಪಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಫೋಕ್ಸೋ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಇಂದು ಆದೇಶ ನೀಡಿದೆ.
ಇದನ್ನೂ ಓದಿ:ಉಡುಪಿ: ಗಾಂಜಾ ನಶೆಯಲ್ಲಿದ್ದ ಗುಂಪಿನಿಂದ ದಂಪತಿಗಳ ಮೇಲೆ ಹಲ್ಲೆ!!
ಬ್ರಹ್ಮಾವರದ ರಫೀಕ್ (25) ಶಿಕ್ಷೆಗೆ ಗುರಿಯಾದ ಆರೋಪಿ. ರಿಕ್ಷಾ ಚಾಲಕನಾಗಿದ್ದ ರಫೀಕ್ ನೊಂದ ಬಾಲಕಿಯನ್ನು ಕಾಲೇಜಿಗೆ ಕರೆದುಕೊಂಡು ಹೋಗಿ ಬರುತ್ತಿದ್ದು, ನಂತರ ಆಕೆಯ ಮೊಬೈಲ್‌ಗೆ ಕರೆ ಮಾಡಿ ಸಂದೇಶ ಕಳುಹಿಸಿ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದನು. ನಂತರ ಅವಳಿಂದ ಇನ್ಸ್ಟಾಗ್ರಾಮ್ ಐಡಿ ಪಡೆದು ಅದರಲ್ಲಿ ಅವಳ ಭಾವಚಿತ್ರಗಳನ್ನು ಪಡೆದುಕೊಂಡು ಪ್ರೀತಿಸದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೆದರಿಸಿದ್ದನು.
ನಂತರ ಬಾಲಕಿ ಒಪ್ಪದಿದ್ದಾಗ ನಕಲಿ ಐಡಿ ಸೃಷ್ಠಿಸಿ ಅದರಿಂದ ಬಾಲಕಿಯನ್ನು ಸಂಪರ್ಕಿಸಿ, ಆರೋಪಿಯನ್ನು ಪ್ರೀತಿಸುವಂತೆ ತಿಳಿಸಿದ್ದನು. ನಂತರವೂ ನೊಂದ ಬಾಲಕಿಯ ಅಶ್ಲೀಲ ಭಾವಚಿತ್ರವನ್ನು ಸೃಷ್ಠಿಸಿ ವೈರಲ್ ಮಾಡುವುದಾಗಿ ಹೆದರಿಸಿ, ಆಕೆಯನ್ನು ತನ್ನ ರಿಕ್ಷಾದಲ್ಲಿ ಕಾಲೇಜಿನಿಂದ ಮನೆಗೆ ಬೀಡುತ್ತೇನೆಂದು ಕರೆದುಕೊಂಡು ಬಂದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿದ್ದನು ಎಂದು ದೂರಲಾಗಿದೆ.
ಈ ವಿಚಾರವನ್ನು ಬೇರೆಯವರಿಗೆ ತಿಳಿಸಿದರೆ ಸಾಮಾಜಿಕ ಜಾಲತಾಣದಲ್ಲಿ ಭಾವಚಿತ್ರ ವೈರಲ್ ಮಾಡುವುದಾಗಿ ಬೆದರಿಸಿದ್ದನು. ನಂತರ ನೊಂದ ಬಾಲಕಿಯ ತಮ್ಮನ ಹೆಸರಿನ ನಕಲಿ ಇನ್ಸ್ಟಾಗ್ರಾಮ್ ಖಾತೆಗೆ ತೆರೆದು ಅದರಲ್ಲಿ ನೊಂದ ಬಾಲಕಿಯ ಅಶ್ಲೀಲ ಭಾವಚಿತ್ರ ಪೋಸ್ಟ್ ಮಾಡಿದ್ದನು. ಈ ಬಗ್ಗೆ ನೊಂದ ಬಾಲಕಿಯ ತಂದೆ ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ನೊಂದ ಬಾಲಕಿಯನ್ನು ವಿಚಾರಿಸಿದಾಗ ಘಟನೆಯ ಬಗ್ಗೆ ತಿಳಿಸಿದಳೆನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಆಗಿನ ಬ್ರಹ್ಮಾವರ ಠಾಣಾ ಎಸ್ ಐ ಮಧು ನೊಂದ ಬಾಲಕಿಯ ಹೇಳಿಕೆಯ ಆಧಾರದಂತೆ ಪ್ರಕರಣವನ್ನು ಪರಿವರ್ತಿಸಲು ನ್ಯಾಯಾಲಯ ಅನುಮತಿ ಪಡೆದು ಪ್ರಕರಣದ ಮುಂದಿನ ತನಿಖೆಯನ್ನು ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ್ ಪಿ.ಎಂ. ಅವರಿಗೆ ಹಸ್ತಾಂತರಿಸಿದರು. ಅದರಂತೆ ಆರೋಪಿಯ ವಿರುದ್ಧ ದೋಷರೋಪಣಾ ಸಲ್ಲಿಸಲಾ ಗಿದ್ದು, ಒಟ್ಟು 34 ಸಾಕ್ಷಿಗಳ ಪೈಕಿ 20 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ.
ಈ ಬಗ್ಗೆ ಆರೋಪಿಯ ವಿರುದ್ಧ ಪ್ರಕರಣ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ಹಾಗೂ 24ಸಾವಿರ ರೂ. ದಂಡ ವಿಧಿಸಿದರು. ನೊಂದ ಬಾಲಕಿಗೆ ಸರಕಾರ 2ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದ ಮಂಡಿಸಿದ್ದರು.