ಮಂಗಳೂರು (ಜ.18): ಮಂಗಳೂರಿನ ಉಳ್ಳಾಲ ಸಮೀಪದ ಕೋಟೆಕಾರು ಬ್ಯಾಂಕ್ನಲ್ಲಿ ನಡೆದಿದ್ದ ದರೋಡೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿನಲ್ಲಿದ್ದ ಸಂದರ್ಭ ನೋಡಿಯೇ ಬ್ಯಾಂಕ್ ದರೋಡೆಗೆ ಸ್ಕೆಚ್ ಹಾಕಿದ್ದ ದುಷ್ಕರ್ಮಿಗಳು, ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲೂ ಖತರ್ನಾಕ್ ಪ್ಲಾನ್ ಮಾಡಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಕಾಸರಗೋಡು: ಮದುವೆ ನಿಶ್ಚಯಗೊಂಡಿದ್ದ ಯುವತಿಗೆ ಮತ್ತೊಂದು ಲವ್
ಇದೀಗ ಬ್ಯಾಂಕ್ ಸಿಬ್ಬಂದಿ ಮೇಲೆಯೇ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಯಾಕೆಂದರೆ ದೂರಿನಲ್ಲಿ ಒಟ್ಟು 4 ಕೋಟಿ ರೂ. ದೋಚಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ ಮಾಧ್ಯಮಗಳ ಮುಂದೆ ಬ್ಯಾಂಕ್ ಅಧ್ಯಕ್ಷ ಕೃಷ್ಣ ಶೆಟ್ಟಿ ಹೇಳಿದ್ದೇ ಬೇರೆ.
ಅಧ್ಯಕ್ಷರ ಪ್ರಕಾರ ಸುಮಾರು 10-12 ಕೋಟಿ ರೂ. ದೋಚಿದ್ದಾರೆ. ಹೀಗಾಗಿ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿರುವುದು ಸ್ಥಳೀಯರ ಅನುಮಾನಕ್ಕೆ ಕಾರಣವಾಗಿದೆ. ಈ ಹಿಂದೆಯೂ ಒಮ್ಮೆ ಇದೇ ಬ್ಯಾಂಕ್ ನಲ್ಲಿ ದರೋಡೆಯಾಗಿತ್ತು ಎನ್ನಲಾಗಿದ್ದು, ಆಗ ಬ್ಯಾಂಕ್ ಸಿಬ್ಬಂದಿಗಳದ್ದೇ ಕೈವಾಡವಿತ್ತು ಎಂದು ಸ್ಥಳೀಯರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಇದೀಗ ಬ್ಯಾಂಕ್ ಗೆ ಸಂಬಂಧಪಟ್ಟವರ ಹೇಳಿಕೆಯಲ್ಲೇ ಗೊಂದಲಗಳು ಕಂಡುಬರುತ್ತಿದೆ.
ಪೊಲೀಸರನ್ನು ಗೊಂದಲಕ್ಕೀಡು ಮಾಡುವುದಕ್ಕಾಗಿಯೇ ದರೋಡೆಕೋರರು ಎರಡು ಒಂದೇ ರೀತಿಯ ಕಾರಿನಲ್ಲಿ ಬಂದಿದ್ದರು. ಹೆದ್ದಾರಿ ತಲುಪುತ್ತಿದ್ದಂತೆಯೇ ಒಂದು ಕಾರು ಮಂಗಳೂರಿನ ಕಡೆ ತೆರಳಿದ್ದರೆ, ಇನ್ನೊಂದು ಕಾರು ಕೇರಳ ಕಡೆ ಪರಾರಿಯಾಗಿದೆ. ಹೀಗೆ ಎರಡು ಕಾರುಗಳಲ್ಲಿ ದರೋಡೆಕೋರರು ಬೇರ್ಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ಕೃತ್ಯ ಎಸಗುವ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಯ ಮೊಬೈಲ್ ಫೋನನ್ನೂ ದರೋಡೆಕೋರರು ಕಿತ್ತುಕೊಂಡು ಹೋಗಿದ್ದಾರೆ. ದರೋಡೆಕೋರರ ಒಂದು ತಂಡ ಮಂಗಳೂರು ನಗರದ ಕಡೆಗೆ ಬಂದು ಮೊಬೈಲ್ ಎಸೆದು ಪರಾರಿಯಾಗಿದೆ. ದರೋಡೆಕೋರರು ಮಂಗಳೂರು-ಉಡುಪಿ ಗಡಿ ಪ್ರದೇಶವಾದ ಹೆಜಮಾಡಿ ಬಳಿ ಮೊಬೈಲ್ ಎಸೆದು ಹೋಗಿದ್ದಾರೆ. ಸದ್ಯ ಹೆಜಮಾಡಿ ಬಳಿ ಆ ಮೊಬೈಲ್ ಪತ್ತೆಯಾಗಿದೆ.
ಕೇವಲ 6 ನಿಮಿಷದಲ್ಲಿ 12 ಕೋಟಿ ಲೂಟಿ: ದರೋಡೆಕೋರರು ಪರಾರಿ!
ಉಳ್ಳಾಲ ತಾಲೂಕಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆಸಿ ರೋಡ್ ಶಾಖೆಗೆ ಶುಕ್ರವಾರ ಮಧ್ಯಾಹ್ನ ಫಿಯೆಟ್ ಕಾರಿನಲ್ಲಿ ಆಗಮಿಸಿದ ಐವರು ಆಗಂತುಕರ ತಂಡ, ಬಂದೂಕು ತೋರಿಸಿ ಡಕಾಯಿತಿ ಮಾಡಿತ್ತು. ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿದ್ದ ಚಿನ್ನ, ಒಡವೆ, ನಗದುಗಳೆಲ್ಲವನ್ನೂ ದೋಚಿಕೊಂಡು ಪರಾರಿಯಾಗಿತ್ತು.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಗಮಿಸಿದ್ದ ಐವರಿದ್ದ ಡಕಾಯಿತರು ರಾಬರಿ ಮಾಡಿದ್ದರು. ಅದೇ ಸಂಧರ್ಭದಲ್ಲಿ ರಸ್ತೆ ಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳಿಗೂ ದರೋಡೆಕೋರರು ಬೆದರಿಸಿದ್ದರು ಎಂಬುದು ತಿಳಿದುಬಂದಿದೆ.
ದರೋಡೆಕೋರರ ತಂಡ ಕೇರಳಕ್ಕೆ ಪಲಾಯನ ಮಾಡಿದೆ ಎನ್ನಲಾಗಿತ್ತು. ಹೀಗಾಗಿ ಮಂಗಳೂರಿನ ಮೂರು ಪೊಲೀಸ್ ತಂಡಗಳು ಕೇರಳಕ್ಕೆ ತೆರಳಿ ಅಲ್ಲಿಯೂ ಶೋಧ ಕಾರ್ಯ ನಡೆಸಿವೆ. ದರೋಡೆಕೋರರ ತಂಡ ಪೊಲೀಸರ ತನಿಖೆಯ ದಿಕ್ಕುತಪ್ಪಿಸಲು ಮಾಡಿದ್ದ ಖತರ್ನಾಕ್ ಪ್ಲ್ಯಾನ್ ಬಹಿರಂಗವಾಗಿದೆ.