ಉತ್ತರ ಕನ್ನಡ (ಜ.19): ಕರ್ನಾಟಕದಲ್ಲಿ ಹಸುಗಳ ಮೇಲೆ ಕ್ರೌರ್ಯ ಮೆರೆಯುತ್ತಿರುವ ಪ್ರಕರಣಗಳು ಹೆಚ್ವುತ್ತಲೇ ಇವೆ. ಮೊನ್ನೆ ಅಷ್ಟೇ ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕನಗರದಲ್ಲಿ ಆಗಂತುಕರು ಹಾಲು ತುಂಬಿದ ಮೂರು ಹಸುಗಳ ಕೆಚ್ಚಲು ಕೊಯ್ಯುವ ಮೂಲಕ ಅಟ್ಟಹಾಸ ಮೆರೆದಿದ್ದರು. ಇದರ ಬೆನ್ನಲ್ಲೇ ಮೈಸೂರಿನಲ್ಲೂ ಸಹ ಮಚ್ಚಿನಿಂದ ಹಸುವಿನ ಬಾಲಕ್ಕೆ ಹಾನಿಗೊಳಿಸಿದ್ದರು. ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದು ದೇಹ ಕೊಂಡೊಯ್ದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಮಂಡ್ಯ: ಸಪ್ತಪದಿ ತುಳಿಯುವ ಮುನ್ನವೇ ದುರಂತ ಅಂತ್ಯ ಕಂಡ ಇಂಜಿನಿಯರ್!!!
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಾಲ್ಕೋಡು ಗ್ರಾಮದಲ್ಲಿ ಕೃಷ್ಣ ಆಚಾರಿ ಎಂಬುವವರಿಗೆ ಸೇರಿದ ಹಸುವಿನ ತಲೆ ಕಡಿದು ಬಳಿಕ ಅದರ ದೇಹವನ್ನು ಕೊಂಡೊಯ್ದಿದ್ದಾರೆ. ಜನವರಿ 18 ರಂದು ಮನೆಯಿಂದ ಮೇಯಲು ಹೋಗಿದ್ದ ಹಸು ರಾತ್ರಿಯಾದರೂ ಸಹ ವಾಪಸ್ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಜನವರಿ 19 ರ ಬೆಳಿಗ್ಗೆ ಮಾಲೀಕ ಕೃಷ್ಣ ಆಚಾರಿ ಅವರು ಹಸುವಿಗಾಗಿ ಹುಡುಕಾಟ ನಡೆಸಿದ್ದಾರೆ. ಆ ವೇಳೆ ಹಸುವಿನ ರಕ್ತ, ಕಾಲು ಹಾಗೂ ರುಂಡ ಪತ್ತೆಯಾಗಿದೆ. ಇದನ್ನು ನೋಡಿ ಹಸುವಿನ ಮಾಲೀಕ ಕೃಷ್ಣ ಆಚಾರಿ ಬೆಚ್ಚಿಬಿದ್ದಿದ್ದಾರೆ.
ದುರುಳರು ಹಸುವಿನ ರುಂಡ ಬೇರ್ಪಡಿಸಿ, ಕಾಲು ಕತ್ತರಿಸಿ ದೇಹವನ್ನು ಮಾತ್ರ ತೆಗೆದುಕೊಂಡು ಹೋಗಿದ್ದಾರೆ. ಭಕ್ಷಣೆಗಾಗಿ ಹಸುವಿನ ದೇಹವನ್ನು ಮಾತ್ರ ಕೊಂಡೊಯ್ದಿರುವ ಶಂಕೆ ವ್ಯಕ್ತವಾಗಿದೆ. ಕಾಡು ಪ್ರಾಣಿ ದಾಳಿ ಮಾಡಿದ್ರೆ ಹಸುವಿನ ದೇಹದ ಭಾಗಗಳು ಪ್ರತ್ಯೇಕವಾಗಿ ತುಂಡು ತುಂಡಾಗಿ ಬೀಳುವುದಿಲ್ಲ. ಇದು ಮಾಂಸ ಭಕ್ಷಣೆಗೆಂದೇ ಮಾಡಿದ ಹೇಯ ಕೃತ್ಯ ಎಂದು ಸ್ಥಳೀಯರು ಆರೋಪಿಸಿದ್ದು, ಗರ್ಭ ಧರಿಸಿದ್ದ ಹಸುವನ್ನು ಕಳೆದುಕೊಂಡು ಮಾಲೀಕ ಕೃಷ್ಣ ಆಚಾರಿ ಆಘಾತಕ್ಕೊಳಗಾಗಿದ್ದಾರೆ.