ಉಜಿರೆ :(ಜ.21) ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಉಜಿರೆಯ ಸರ್ಕಾರಿ ಪ್ರೌಢಶಾಲೆ ಕಲ್ಮಂಜ ಶಾಲೆಗೆ ಅನೇಕ ವರ್ಷಗಳಿಂದ ಅಗತ್ಯತೆ ಇದ್ದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆ ನೀಡಲಾಯಿತು.
ಇದನ್ನೂ ಓದಿ: ಉಡುಪಿ: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಲಾಡ್ಜ್ ಗೆ ಪೊಲೀಸರ ದಾಳಿ
ಪ್ರೌಢಶಾಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 114 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಈವರೆಗೂ ಶುದ್ಧ ಕುಡಿಯುವ ನೀರಿನ ಘಟಕ ಇರಲಿಲ್ಲ. ಶುದ್ದವಲ್ಲದ ನೀರನ್ನು ಕುಡಿದು ವಿದ್ಯಾರ್ಥಿಗಳ ಆರೋಗ್ಯ ಹದಗೆಡಬಾರದು ಎಂಬ ಕಾಳಜಿಯಿಂದ ಶಾಲೆಯ ಆಡಳಿತ ಮಂಡಳಿಯು ಬೆಳ್ತಂಗಡಿಯ ರೋಟರಿ ಸಂಸ್ಥೆಗೆ ಮನವಿ ನೀಡಿತ್ತು.
ಈ ಮನವಿಗೆ ಮನ್ನಣೆ ನೀಡಿದ ಬೆಳ್ತಂಗಡಿ ರೋಟರಿ ಕ್ಲಬ್ ಸಂಸ್ಥೆಯು ಮೂವತ್ತು ಸಾವಿರಕ್ಕೂ ಅಧಿಕ ಮೊತ್ತದ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಲೆಗೆ ನೀಡಿದೆ.
ಶಾಲೆಯ ಆಡಳಿತ ಮಂಡಳಿಗೆ ರೋಟರಿ ಜಿಲ್ಲಾ ಗವರ್ನರ್ ರೋ. ವಿಕ್ರಮ್ ದತ್ತ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮಾ, ಶುದ್ಧ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೋಟರಿ ಅಸಿಸ್ಟೆಂಟ್ ಗವರ್ನರ್ ರೋ. ಮೊಹಮ್ಮದ್ ವಳವೂರು, ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್, ರೋ. ಅನಂತ ಭಟ್, ರೋ. ವಿದ್ಯಾ ಕುಮಾರ್ ಕಾಂಚೋಡು, ರೋ. ಪ್ರಕಾಶ್ ಪ್ರಭು ಸೇರಿದಂತೆ ಕಾಲೇಜಿನ ಶಿಕ್ಷಕರ ವೃಂದ ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ರೋ. ಧನಂಜಯ್ ರಾವ್ ನಿರೂಪಿಸಿ, ವಂದಿಸಿದರು.