ಶಿರ್ಲಾಲು :(ಫೆ.7) ಅಲ್ಲಿ ಮನೆಯ ಮಾಲೀಕನ ಮುಖದಲ್ಲಿ ನಗು ಇತ್ತು, ಕಣ್ಣಲ್ಲಿ ಆನಂದ ಭಾಷ್ಪವಿತ್ತು. ಈ ಘಟನೆಗೆ ಸಾಕ್ಷಿಯಾಗಿದ್ದು ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಬೈಲಡ್ಕ ನಿವಾಸಿ ಸುಂದರ ಮಲೆಕುಡಿಯ ಅವರ ನೂತನ ಮನೆಯಲ್ಲಿ.

ಇದನ್ನೂ ಓದಿ: ಪುತ್ತೂರು: ಆರ್ಯಾಪು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಚಪ್ಪರ ಮುಹೂರ್ತ
ಹೌದು, ಕೆಲ ತಿಂಗಳ ಹಿಂದೆ ವಿಕಲಚೇತನರಾಗಿದ್ದ ಸುಂದರ ಮಲೆ ಕುಡಿಯ ಅವರ ಅನಾರೋಗ್ಯದ ಬಗ್ಗೆ ಹಾಗೂ ಅವರ ಮುರುಕಲು ಮನೆ ಬಗ್ಗೆ ಯು ಪ್ಲಸ್ ಟಿವಿ ವರದಿ ಮಾಡಿತ್ತು. ಈ ವರದಿಗೆ ಸ್ಪಂದಿಸಿದ ಮೂಡಬಿದ್ರೆಯ ಕೇರ್ ಚಾರಿಟೇಬಲ್ ಟ್ರಸ್ಟ್ ಸುಂದರ ಅವರಿಗೆ ಮನೆ ನಿರ್ಮಾಣ ಮಾಡಲು ಮುಂದಾಗಿತ್ತು.
ಈ ಟ್ರಸ್ಟ್ ನ ಮುಖ್ಯಸ್ಥ ಅನಿಲ್ ಅವರ ನೇತೃತ್ವದಲ್ಲಿ ಮನೆ ನಿರ್ಮಾಣವಾಗಿ, ಇಂದು ನೂತನ ಮನೆ ನೆಮ್ಮದಿಯ ಗೃಹ ಪ್ರವೇಶ ಕೂಡ ನಡೆಯಿತು. ಮುಂಜಾನೆ ಗಣಹೋಮ ನಡೆಸಿ ಹಾಲುಕ್ಕಿಸುವ ಕಾರ್ಯ ನಡೆಯಿತು.
ಇದೇ ವೇಳೆ ಮನೆಯ ಹೆಸರನ್ನು ಕುಟುಂಬಸ್ಥರ ಸಮೇತ ಅನಾವರಣ ಮಾಡಲಾಯಿತು. ಮನೆಯ ಗೃಹಪ್ರವೇಶದ ಸಂಪೂರ್ಣ ಜವಾಬ್ದಾರಿಯನ್ನು ಸಮಾಜ ಸೇವಕ ಅನಿಲ್ ಅವರು ವಹಿಸಿಕೊಂಡಿದ್ದರು. ಇನ್ನು ನೂತನ ಮನೆ ನಿರ್ಮಿಸಿಕೊಟ್ಟ ಚಾರಿಟೇಬಲ್ ಟ್ರಸ್ಟ್ ನ ಅನಿಲ್ ಅವರಿಗೆ ಸಹಕರಿಸಿದ ಅವಿಲ್ ಮತ್ತು ಇಲ್ಯಾಸ್ ಪಾಯಸ್, ಜೆಸಿಬಿ ಪ್ರಕಾಶ್ ಅವರಿಗೆ ಸುಂದರ ಅವರ ಕುಟುಂಬಸ್ಥರು ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಸುಂದರ ಮಲೆಕುಡಿಯ, ಯಾರು ಇಲ್ಲದ ನಮಗೆ ಅನಿಲ್ ಅವರು ದೇವರಂತೆ ಬಂದರು. ಬಿದ್ದುಹೋಗುತ್ತಿದ್ದ ನಮಗೆ ನೂತನ ಮನೆಯನ್ನು ನಿರ್ಮಿಸಿಕೊಟ್ಟರು, ಅವರಿಗೆ ದೇವರು ಒಳ್ಳೆದು ಮಾಡಲಿ ಎಂದರು. ಬಳಿಕ ಮಾತನಾಡಿದ ಅನಿಲ್, ನಾನು ಯು ಪ್ಲಸ್ ಟಿವಿಯ ವರದಿ ನೋಡಿ ಇಲ್ಲಿಗೆ ಬಂದೆ. ನೋಡುವಾಗ ನನಗೆ ತುಂಬಾ ನೋವಾಯ್ತು. ನಮ್ಮಂತೆ ಅವರಿಗೂ ಉತ್ತಮ ರೀತಿಯಲ್ಲಿ ಬದುಕುವ ಹಕ್ಕಿದೆ ಅದಕ್ಕಾಗಿ ಮನೆ ನಿರ್ಮಿಸಿಕೊಡುವ ಬಗ್ಗೆ ಅವರಿಗೆ ಭರವಸೆ ನೀಡಿದೆ ಎಂದರು.
ಮನೆ ಕಟ್ಟುವ ಸಮಯದಲ್ಲಿ ನನಗೆ ಹಣದ ಸಮಸ್ಯೆ ಕಾಡಿತು. ಈ ವೇಳೆ ನನ್ನ ಚಿನ್ನವನ್ನು ಅಡವಿಟ್ಟು ಮನೆ ನಿರ್ಮಿಸಿದೆ ಯಾಕೆಂದರೆ ಕೊಟ್ಟ ಮಾತು ತಪ್ಪ ಬಾರದು ಅನ್ನುವ ಉದ್ದೇಶಕ್ಕೆ ಎಂದರು. ಮನೆ ನಿರ್ಮಾಣದ ವೇಳೆ ನಾನು ಬಂದು ಸ್ವತಃ ಕೆಲಸ ಮಾಡಿದೆ. ನನಗೆ ಮಾನವೀಯತೆ ಬಿಟ್ಟು ಬೇರೆ ಏನು ಇಲ್ಲ. ಜಾತಿ-ಧರ್ಮ, ರಾಜಕೀಯ ಇಲ್ಲ ಎಂದರು. ಈ ವೇಳೆ ಸುಂದರ ಅವರ ಸಹೋದರ ಕೃಷ್ಣಪ್ಪ, ಅವರ ತಾಯಿ, ಕುಟುಂಬಸ್ಥರು ಇದ್ದರು. ಮನೆ ನಿರ್ಮಾಣಕ್ಕೆ ಅನಿಲ್ ಅವರ ಜೊತೆ ಕೆಲವರು ಕೈ ಜೋಡಿಸಿದ್ದರು. ಇಂದು ಕಾರ್ಯಕ್ರಮಕ್ಕೆ ಉಚಿತವಾಗಿ ಸೌಂಡ್ಸ್, ಶಾಮಿಯಾನ, ಊಟದ ವ್ಯವಸ್ಥೆ ಸ್ಥಳೀಯರೇ ಮಾಡಿದ್ದರು. ಈ ಮೂಲಕ ಮಾನವೀಯತೆ ಮೆರೆದರು.



