Mon. Feb 24th, 2025

Belal : 1000 ಯುವ ಜನತೆಯಿಂದ ಏಕಕಾಲದಲ್ಲಿ ಅನಂತೋಡಿಯಲ್ಲಿ ಭತ್ತ ಕಟಾವು ಕಾರ್ಯ..! – ಯುವ ಜನತೆಗೆ ಅನ್ನದ ಮಹತ್ವ ತಿಳಿಸಿದ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್..!

ಬೆಳಾಲು :(ಫೆ.10) ಕೈ-ಕಾಲುಗಳಲ್ಲಿ ಕೆಸರು, ತಲೆ ಮೇಲೆ ಮುಟ್ಟಾಳೆ, ಸಾಂಸ್ಕೃತಿಕ ಉಡುಗೆ ತೊಡುಗೆ. ಈ ಸುಂದರ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಬೆಳಾಲಿನ ಅನಂತೋಡಿಯಲ್ಲಿರುವ ಗದ್ದೆ. ಹೌದು, ವಿಭಿನ್ನ ಸಾಮಾಜಿಕ ಕಾರ್ಯಗಳ ಮೂಲಕ ಜನ ಮಾನಸ ತಲುಪಿರುವ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ “ಯುವ ಸಿರಿ ರೈತ ಭಾರತದ ಐಸಿರಿ” ಅನ್ನುವ ಕಾರ್ಯಕ್ರಮವನ್ನು ಯುವ ಜನರಿಗಾಗಿ ಆಯೋಜಿಸಿತ್ತು. ಯುವಕರಿಗೆ ಕೃಷಿ ಬಗ್ಗೆ ಮಾಹಿತಿ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಾವಿರಕ್ಕೂ ಅಧಿಕ ಯುವಕ ಯುವತಿಯರು ಗದ್ದೆಗೆ ಇಳಿದು ಭತ್ತ ಕಟಾವು ಮಾಡಿದರು. ಬಿಸಿಲನ್ನು ಲೆಕ್ಕಿಸದೆ ಯುವ ರೈತರು ಖುಷಿಯಿಂದಲೇ ಫಸಲನ್ನು ಕಟಾವು ಮಾಡಿದರು. ಬಳಿಕ ಕಟಾವು ಮಾಡಿದ ಫಸಲನ್ನು ಹೊತ್ತು ತಂದು ಅನಂತೋಡಿಯ ಅನಂತ ಪದ್ಮನಾಭ ದೇವಸ್ಥಾನದ ಮುಂಭಾಗ ಪೈರು ಮತ್ತು ಭತ್ತವನ್ನು ಬೇರ್ಪಡಿಸುವ ಕೆಲಸ ಮಾಡಿದರು. ಈ ಮೂಲಕ ಅನ್ನದ ಮಹತ್ವವನ್ನು ವಿದ್ಯಾರ್ಥಿಗಳು ತಿಳಿದರು.

ಇದನ್ನೂ ಓದಿ: Andhra Pradesh: ತಿರುಪತಿ ಲಡ್ಡು ಪ್ರಸಾದ ಕಲಬೆರಕೆ ಪ್ರಕರಣ

ಸುಮಾರು 9.30ಗೆ ಅನಂತ ಪದ್ಮನಾಭ ದೇವಸ್ಥಾನದಿಂದ ಸಾಲಾಗಿ ಯುವ ರೈತರ ತಂಡ ಹೊರಡಿತ್ತು. ಗದ್ದೆಯಲ್ಲಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ಸೋನಿಯಾ ಯಶೋವರ್ಮ, ಉಜಿರೆ ಜನಾರ್ದನ ದೇವಸ್ಥಾನದ ಆಡಳಿತ ಮೋಕ್ತೆಸರರಾದ ಶರತ್ ಕೃಷ್ಣ ಪಡ್ವೆಟ್ನಾಯ ಸೇರಿ ಹಲವು ಗಣ್ಯರು ಚಾಲನೆ ನೀಡಿದರು. ಬಳಿಕ ಸುಮಾರು 5 ಎಕರೆ ಗದ್ದೆಯಲ್ಲಿ ಭತ್ತದ ಕಟಾವು ಕಾರ್ಯ ಆರಂಭವಾಯಿತು. ಯುವ ರೈತರಿಗೆ ಗ್ರಾಮೀಣ ಭಾಗದ ಹಿರಿಯರು ಮಾರ್ಗದರ್ಶನ ನೀಡಿದರು. ಸೂರ್ಯ ನೆತ್ತಿಗೇರುವ ಮುನ್ನ 5 ಎಕರೆ ಭೂಮಿಯಲ್ಲಿದ್ದ ಭತ್ತವನ್ನು ಯುವಕ -ಯುವತಿಯರು ಕಟಾವು ಮಾಡಿ ಅದನ್ನು ತಲೆ ಮೇಲೆ ಹೊತ್ತು ದೇವಸ್ಥಾನದ ಮುಂಭಾಗ ಭತ್ತ ಮತ್ತು ಪೈರನ್ನು ಬೇರ್ಪಡಿಸಿದರು.

ಹುಲ್ಲು ಗೋಶಾಲೆಗೆ, ಅಕ್ಕಿ ನೈವೇದ್ಯಕ್ಕೆ..! :


ಈ ವಿನೂತನ ಕಾರ್ಯಕ್ರಮದಲ್ಲಿ ದೊರಕುವ ಅಕ್ಕಿಯನ್ನು ದೇವರ ನೈವೇದ್ಯಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ, ಉಜಿರೆ ಜನಾರ್ದನ ದೇವಸ್ಥಾನ ಮತ್ತು ಅನಂತೋಡಿಯ ದೇವಾಲಯಗಳಿಗೆ ನೀಡಲಾಗುತ್ತೆ. ಇನ್ನು ಇದರಲ್ಲಿ ಸಿಗುವ ಹುಲ್ಲನ್ನು ಕಳೆಂಜದ ಗೋಶಾಲೆಗೆ ನೀಡಲಾಗುವುದು ಎಂದು ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ತಿಳಿಸಿದರು.

ಅನ್ನದ ಮಹತ್ವ ತಿಳಿಸುವ ಅಗತ್ಯವಿದೆ..! :

ಇಂದಿನ ಯುವ ಜನತೆಗೆ ಅನ್ನದ ಮಹತ್ವ ತಿಳಿಸುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಬದುಕು ಕಟ್ಟೋಣ ಬನ್ನಿ ಮತ್ತು ಸಂಘ ಸಂಸ್ಠೆಗಳು ವಿದ್ಯಾರ್ಥಿ ಸಮುದಾಯಕ್ಕೆ ಭತ್ತದ ನಾಟಿ, ಭತ್ತದ ಕಟಾವು ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಅರ್ಥ ಪೂರ್ಣ ಎಂದು ಡಾ. ಹೇಮಾವತಿ ವೀ ಹೆಗ್ಗಡೆ ತಿಳಿಸಿದರು. ಯುವಸಿರಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು, ಹಿಂದಿನ ಪದ್ದತಿ, ಆಚಾರ-ವಿಚಾರಗಳನ್ನು ಯುವ ಸಮುದಾಯ ಅರಿತುಕೊಳ್ಳಬೇಕು. ಇಂದು ಬರಡು ಭೂಮಿಯನ್ನು ಹಚ್ಚ ಹಸರಾಗಿಸಿದ ಕೀರ್ತಿ ಬದುಕು ಕಟ್ಟೋಣ ಬನ್ನಿ ತಂಡಕ್ಕೆ ಸಲ್ಲುತ್ತದೆ ಎಂದರು.

ಈ ಕಾರ್ಯಕ್ರಮ ಅಚ್ಚಳಿಯದೆ ಉಳಿಯುವ ಕಾರ್ಯ..! :

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೋನಿಯಾ ಯಶೋವರ್ಮಾ, ನೇಜಿ ನಾಟಿ, ಭತ್ತ ಕಟಾವು ಕಾರ್ಯಕ್ರಮ ಅಚ್ಚಳಿಯದೆ ಉಳಿಯುವ ಕಾರ್ಯಕ್ರಮ. ಮಕ್ಕಳಿಗೆ ಕುತೂಹಲ, ಆಸಕ್ತಿಯಿದೆ ಆದರೆ ಅವಕಾಶ ಸಿಗುವುದಿಲ್ಲ ಇಂದು ಬದುಕು ಕಟ್ಟೋಣ ಬನ್ನಿ ತಂಡ ಭತ್ತದ ಬೆಳೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ ಎಂದರು.

ಸಂಚಾಲಕ ಮೋಹನ್ ಕುಮಾರ್ ಮಾತು..! :


ಯುವ ಜನತೆ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮ ಮಾಡಿದ್ದೇವೆ. ಅನ್ನ ಅಂಗಡಿಯಲ್ಲಿ ಸಿಗುತ್ತೆ, ಮರದಲ್ಲಿ ಬೆಳೆಯುತ್ತದೆ ಅನ್ನೋದು ಈಗೀನ ಯುವ ಜನತೆ ಸಾಮಾನ್ಯವಾಗಿ ಹೇಳುವ ಮಾತು. ಆದರೆ ಅದರ ಹಿಂದಿನ ಶ್ರಮ ಏನಿದೆ ಅನ್ನುವುದನ್ನು ತೋರಿಸಿ ಕೊಡುವ ಉದ್ದೇಶದಿಂದ ಈ ಕಾರ್ಯಕ್ರಮ ಮಾಡಿದ್ದೇವೆ. ಆರಂಭದಿಂದಲೂ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳು ನಮ್ಮ ಜೊತೆಯಾಗಿದ್ದರು. ಎಲ್ಲಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ರೈತರ ಶ್ರಮ ಈಗ ಅವರಿಗೆ ಗೊತ್ತಾಗಿದೆ ಎಂದರು.

ಬದುಕು ಕಟ್ಟೋಣ ಬನ್ನಿ ತಂಡಕ್ಕೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ :

ಏಕಕಾಲದಲ್ಲಿ 4.30 ಎಕರೆ ಗದ್ದೆಯಲ್ಲಿ 735 ಮಂದಿಯಿಂದ ನಡೆದ ನೇಜಿ ನಾಟಿ ಕಾರ್ಯಕ್ರಮಕ್ಕೆ ಬದುಕು ಕಟ್ಟೋಣ ಬನ್ನಿ ತಂಡಕ್ಕೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು ಇದೇ ವೇದಿಕೆಯಲ್ಲಿ ಸಂಚಾಲಕ ಮೋಹನ್ ಕುಮಾರ್ ಅವರಿಗೆ ಹಸ್ತಾಂತರ ಮಾಡಲಾಯಿತು.

ಯಾರೆಲ್ಲ ಇದ್ದರು..?:


ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಉದ್ಯಮಿ ಶಶಿಧರ ಶೆಟ್ಟಿ ಬರೋಡಾ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ, ರುಡ್ ಸೆಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ ವಿಜಯ್ ಕುಮಾರ್, ಎಸ್.ಡಿ,ಎಂ ಕಾಲೇಜಿನ ಪ್ರಾಂಶುಪಾಲ ಬಿ.ಎ ಕುಮಾರ್ ಹೆಗ್ಡೆ, ಎಸ್.ಡಿ.ಎಂ ಆಸ್ಪತ್ರೆಯ ಆಡಳಿತ ನಿರ್ದೇಶಕ ಎಂ. ಜನಾರ್ದನ್ , ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ, ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್, ಖ್ಯಾತ ವಕೀಲ ಧನಂಜಯ್ ರಾವ್, ಅನಂತೋಡಿ ದೇವಸ್ಥಾನದ ದುರ್ಗಾ ಪ್ರಸಾದ್‌, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಗೌಡ ಬೆಳಾಲು ಮತ್ತಿತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *