ಬೆಳ್ತಂಗಡಿ:(ಫೆ.14) (ಇಂದು) ಶುಕ್ರವಾರ ಊರಿಗೆ ಮರಳುವ ಸಂತೋಷದಲ್ಲಿದ್ದು ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ತನ್ನನ್ನು ಕರೆತರಲು ಮಿತ್ರನಿಗೆ ಕರೆ ಮಾಡಿ ಹೇಳಿದ್ದ ಬೆಳ್ತಂಗಡಿಯ ಸಂಜಯನಗರ ನಿವಾಸಿ ಹಿದಾಯತ್ ಸೌದಿ ಅರೇಬಿಯಾದಲ್ಲಿ ಸಾವನ್ನಪ್ಪಿದ ಘಟನೆ ಗುರುವಾರ ತಡ ರಾತ್ರಿ ನಡೆದಿದೆ.

ತನ್ನೂರಿಗೆ ಬರುವ ಸಂತೋಷದಲ್ಲಿದ್ದ ಹಿದಾಯತ್ ತನ್ನ ಸ್ನೇಹಿತ ರಫೀಕ್ ಎಂಬವರಿಗೆ ಕರೆ ಮಾಡಿ ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತನ್ನ ಕಾರನ್ನು ತರಲು ಹೇಳಿ ಜಿದ್ದಾದಿಂದ ರಾತ್ರಿ 10:30 ರ ವಿಮಾನದಲ್ಲಿ ಹೊರಟು ಬೆಳಗಿನ ಜಾವ ಮಂಗಳೂರು ತಲುಪುವವರಿದ್ದರು.
ಜಿದ್ದಾ ವಿಮಾನ ನಿಲ್ದಾಣಕ್ಕೆ ಕಾರಲ್ಲಿ ಬಂದು ತಲುಪಿದ್ದಂತೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ತಕ್ಷಣ ಅವರನ್ನು ಅಲ್ಲಿನ ವಿಮಾನ ನಿಲ್ದಾಣದ ಪಕ್ಕದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅದಾಗಲೇ ಅವರು ಇಹಲೋಕ ತ್ಯಜಿಸಿದರು.


ಅತ್ಯುತ್ತಮ ಹಿನ್ನಲೆ ಗಾಯಕರೂ ಆಗಿದ್ದ ಅವರು ಆರಂಭದಲ್ಲಿ ಉದ್ಯೋಗ ನಿಮಿತ್ತ ಬಹರೈನ್ ಗೆ ತೆರಳಿದ್ದವರು ಬಳಿಕ ಸೌದಿ ಅರೇಬಿಯಾಕ್ಕೆ ತೆರಳಿದ್ದು ಕಾರ್ಗೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಮೃತರು ತಂದೆ ಅಬ್ದುಲ್ ರಖಾಕ್, ತಾಯಿ ಶಂಶಿರ ಬಾನು, ಪತ್ನಿ ರೇಷ್ಮಾ ಹಾಗೂ ಒಂದು ಗಂಡು,ಮೂರು ಹೆಣ್ಣು ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಅವರ ಪಾರ್ಥಿವ ಶರೀರವನ್ನು ಊರಿಗೆ ತರುವ ಬಗ್ಗೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಒಂದು ದಿನದಲ್ಲಿ ವಿವರ ತಿಳಿಯಲಿದೆ ಎಂದು ಅವರ ಬಾಲ್ಯ ಸ್ನೇಹಿತ,ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ತಿಳಿಸಿದ್ದಾರೆ.
