ಪುತ್ತೂರು:(ಫೆ.17) ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ ವೇಳೆ ಭಾರೀ ಅವಘಡವೊಂದು ಸಂಭವಿಸಿದೆ. ತೆಂಗಿನಮರ ಮುರಿದು ಬಿದ್ದು ದೇವಸ್ಥಾನದ ನಿತ್ಯ ಕಾರ್ಮಿಕನೋರ್ವನಿಗೆ ಗಂಭೀರ ಸ್ವರೂಪದ ಗಾಯ ಉಂಟಾಗಿದೆ ಎಂದು ತಿಳಿದುಬಂದಿದೆ. ದೇವಳದ ಪುಷ್ಕರಣಿ ಸಮೀಪ ಅವಘಡ ನಡೆದಿದ್ದು, ರವಿ(35) ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ತಕ್ಷಣ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ.

ಇನ್ನು ದೇವಳದ ನಿತ್ಯ ಕಾರ್ಮಿಕರನ್ನ ಅನಧಿಕೃತವಾಗಿ ಮರಕಡಿಯುವ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಈ ಬಗ್ಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಎಚ್ಚೆತ್ತುಕೊಳ್ಳಲಿಲ್ಲ. ಮರ ಕಡಿಯುವ ಕೆಲಸಗಾರರು ದೇವಳದ ನಿತ್ಯ ಕಾರ್ಮಿಕನನ್ನ ಕೆಲಸಕ್ಕೆ ಬಳಸಿಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಕಳೆದ ಕೆಲ ದಿನಗಳಿಂದ ದೇವಳದ ನಿತ್ಯ ಕಾರ್ಮಿಕರನ್ನ ಬಳಸಿಕೊಳ್ಳುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಕೂಡಲೇ ದೇವಳದ ವ್ಯವಸ್ಥಾಪನಾ ಸಮಿತಿ ಎಚ್ಚೆತ್ತುಕೊಳ್ಳಬೇಕಿದೆ.



ಇನ್ನು ನಿನ್ನೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಾಂಬೂಲ ಪ್ರಶ್ನೆ ನಡೆದಿತ್ತು. ದೇವಳದ ಅಭಿವೃದ್ಧಿ ಕೆಲಸ ಕಾಮಗಾರಿ ಮುಂದುವರಿಯಬಹುದೇ ಎಂಬ ಬಗ್ಗೆ ಮಹಾಲಿಂಗೇಶ್ವರನಿಗೆ ಸಮ್ಮತಿ ಇದೆಯಾ ಎಂಬುದಾಗಿ ಪ್ರಶ್ನೆ ಇಡಲಾಗಿತ್ತು. ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಂತೆ ಅಭಿವೃದ್ಧಿಗೆ ದೇವರ ತೃಪ್ತಿ ಇದೆ, ಸನ್ನಿಧಾನಕ್ಕೆ ಸಂತೋಷವಿದೆ. ಆದರೆ ಅಭಿವೃದ್ಧಿ ದೃಷ್ಟಿಯಿಂದ ದೇವಸ್ಥಾನದ ಜಾಗವನ್ನು ಬಿಡಬೇಕೆಂದು ಮೊದಲಿನಿಂದಲೂ ಕಂಡುಬಂದಿದೆ.

ಈ ಜಾಗವನ್ನು ದೇವರಿಗೆ ಉಚಿತವಾಗಿ ಬಿಟ್ಟು ಕೊಡಬೇಕಾಗಿತ್ತು. ಆದರೆ ಜಾಗ ಬಿಟ್ಟು ಹೋದವರಿಗೆ ಹಣ ನೀಡಬಾರದಿತ್ತು. ಬದಲಾಗಿ ಆ ಮೊತ್ತವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದಿತ್ತು ಎಂಬಲ್ಲ ವಿಚಾರ ಕಂಡುಬಂತು. ಬಳಿಕ ಇಲ್ಲಿ ಕೆಲವೊಂದು ದೋಷಗಳಿಗೆ ಅವುಗಳನ್ನೆಲ್ಲ ಪರಿಹರಿಸಬೇಕೆಂದು ದೈವಜ್ಞರು ಹೇಳಿದರು. ತಾಂಬೂಲ ಪ್ರಶ್ನೆ ನಿನ್ನೆ ನಡೆದ್ರೆ ಇಂದು ಮಹಾಲಿಂಗೇಶ್ವರ ಅಭಿವೃದ್ಧಿಯ ಕಾಮಗಾರಿ ವೇಳೆಯೇ ಅವಘಡವೂ ನಡೆದಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆತಂಕವೂ ಎದುರಾಗಿದೆ. ಆದಷ್ಟು ಬೇಗ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದ್ಯ ಅಲ್ಲಿನ ದೋಷಕ್ಕೆ ಪರಿಹಾರ ಕಂಡುಕೊಳ್ಳುತ್ತಾ ಎಂಬುದನ್ನು ಕಾದುನೋಡಬೇಕಿದೆ.
