ಮಂಗಳೂರು:(ಫೆ.19) ಆಂಧ್ರ ಪ್ರದೇಶದಿಂದ ಮಂಗಳೂರು ಮೂಲಕ ಕೇರಳಕ್ಕೆ ಸಾಗಿಸುತ್ತಿದ್ದ 119 ಕೆಜಿ ಗಾಂಜಾವನ್ನು ಮಂಗಳೂರು ನಗರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಅಪ್ರಾಪ್ತ ಮಗಳಿಗೆ ಆಕ್ಟಿವಾ ಹೋಂಡಾ ಕೊಟ್ಟು ತಾಯಿ ಕಟ್ಟಿದ ದಂಡ ಎಷ್ಟು ಗೊತ್ತಾ?!
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಅಜಯ್ ಕೃಷ್ಣನ್ ಯು., ಜೀವನ್ ಸಿಂಗ್, ಮೊಯ್ದಿನ್ ಶಬ್ಬೀರ್ ಮತ್ತು ಮಹೇಶ್ ದ್ವಾರಕನಾಥ್ ಪಾಂಡೆ ಬಂಧಿತ ಆರೋಪಿಗಳು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಮಂಗಳೂರು ಮೂಲಕ ಕೇರಳಕ್ಕೆ ಅಪಾರ ಪ್ರಮಾಣದ ಗಾಂಜಾ ಸಾಗಿಸಲಾಗುತ್ತಿದೆ ಎಂಬ ಸುಳಿವು ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಕಾರು ಮತ್ತು ಮಿನಿ ಟ್ರಕ್ ಅನ್ನು ತಡೆದು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.


ಕಾರನ್ನು ಪರಿಶೀಲಿಸುವಾಗ ಪೊಲೀಸರು 34 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಮಿನಿ ಟ್ರಕ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಕೆಲವು ಖಾಲಿ ಮೀನಿನ ಟ್ರೇಗಳು ಮತ್ತು ಹಲವಾರು ಪ್ಯಾಕೆಟ್‌ಗಳಲ್ಲಿ ಪ್ಯಾಕ್ ಮಾಡಲಾದ 85 ಕೆಜಿ ಗಾಂಜಾವನ್ನು ಪತ್ತೆಯಾಗಿದೆ. ಬಂಧಿತರಿಂದ ಐದು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಮೊಯ್ದೀನ್ ಶಬ್ಬೀರ್ ಕೇರಳದ ಕುಖ್ಯಾತ ಅಪರಾಧಿಯಾಗಿದ್ದು, ಈತನ ವಿರುದ್ಧ ಕೊಲೆ, ಶಸ್ತ್ರಾಸ್ತ್ರ ಕಾಯ್ದೆ, ಗಾಂಜಾ ಮಾರಾಟ, ದನ ಕಳ್ಳತನ ಸೇರಿದಂತೆ 12 ಪ್ರಕರಣಗಳಿವೆ. ಆತನ ಸಹಚರ ಅಜಯ್ ಕೃಷ್ಣನ್ ವಿರುದ್ಧ ಕಳ್ಳತನ ಸೇರಿದಂತೆ ಆರು ಪ್ರಕರಣಗಳಿವೆ.


2021 ರಲ್ಲಿ ಮಹೇಶ್ ಪಾಂಡೆ ಮತ್ತು ಜೀವನ್ ಸಿಂಗ್ ಅವರೊಂದಿಗೆ ಪರಿಚಯವಾಗಿದ್ದ ಪ್ರಕರಣವೊಂದರಲ್ಲಿ ಶಬ್ಬೀರ್ ನನ್ನು ಬಂಧಿಸಲಾಗಿತ್ತು. ಜೈಲಿನಿಂದ ಹೊರಬಂದ ನಂತರ, ಈ ಇಬ್ಬರು ಆಂಧ್ರ ಪ್ರದೇಶದಿಂದ ಕೇರಳಕ್ಕೆ ಗಾಂಜಾ ಸಾಗಿಸಲು ಸಂಚು ರೂಪಿಸಿದ್ದರು. ವಿಶಾಖಪಟ್ಟಣಂ ಆಂಧ್ರಪ್ರದೇಶದ ಒಳಗಿನ ನಕ್ಸಲ್ ಪೀಡಿತ ಪ್ರದೇಶಗಳಿಂದ ಗಾಂಜಾ ಸಂಗ್ರಹಿಸುವ ಸ್ಥಳವಾಗಿದೆ ಎಂದು ಹೇಳಿದ ಆಯುಕ್ತರು, ನಂತರ ಅದನ್ನು ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಸರಬರಾಜು ಮಾಡಲಾಗುತ್ತದೆ ಎಂದು ಹೇಳಿದರು.
