ಉಜಿರೆ:(ಫೆ.20) ಅಕಾಡೆಮಿಕ್‌ಜ್ಞಾನದ ಸಂಪಾದನೆ ಮಾತ್ರವಲ್ಲದೆ ವನ ಮತ್ತು ಜಲ ಸಾಕ್ಷರತೆ ಹೊಂದುವುದು ಇಂದಿನ ಅಗತ್ಯವಾಗಿದೆ. ಅರಣ್ಯದ ಅನುಭವ ಜ್ಞಾನದಿಂದ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯವಿದೆ ಎಂದು ಪರಿಸರ ಚಿಂತಕ ಶಿವಾನಂದ ಕಳವೆ ಹೇಳಿದರು.

ಇದನ್ನೂ ಓದಿ: ನೆರಿಯ: ಹಾಡಹಗಲೇ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
ಉಜಿರೆ ಶ್ರೀ ಧ. ಮಂ ಕಾಲೇಜಿನಲ್ಲಿ ಕನ್ನಡ ಮತ್ತು ಪತ್ರಿಕೋದ್ಯಮ ವಿಭಾಗ ಗುರುವಾರ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನ ಮತ್ತು ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ. ಯಶೋವರ್ಮ ಅವರ ಸ್ಮರಣಾರ್ಥ ಉಪನ್ಯಾಸ ಮಾಲೆ ʼಅರಿವಿನ ದೀವಿಗೆʼ ಕಾರ್ಯಕ್ರಮದಲ್ಲಿ ʼಪರಿಸರ ಸಂರಕ್ಷಣೆಯಲ್ಲಿ ಪರ್ಯಾಯ ದಾರಿಗಳುʼ ಎಂಬ ವಿಷಯದ ಕುರಿತಾಗಿ ಅವರು ಮಾತನಾಡಿದರು.
ವೇಗದ ಬದುಕಿನ ಅನಿವಾರ್ಯತೆಗಳಿಂದ ಕರಾವಳಿ ಮತ್ತು ಪಶ್ಚಿಮ ಘಟ್ಟಗಳಲ್ಲಿ ಅರಣ್ಯನಾಶ ಮತ್ತು ಭೂಕುಸಿತಗಳು ಉಂಟಾಗುತ್ತಿವೆ. ಸ್ಥಳೀಯ ಪರಿಸರದ ಜ್ಞಾನದ ಅಳವಡಿಕೆಯಿಲ್ಲದೆ ವಿದೇಶಿ ಸಸ್ಯಗಳನ್ನು ಅರಣ್ಯಗಳಲ್ಲಿ ಬೆಳೆಸಿರುವುದು ಪರಿಸರದ ಅಸಮತೋಲನಕ್ಕೆ ಕಾರಣವಾಗಿದೆ. ನಿಸರ್ಗದ ನಿಯಮ, ನಡೆಗಳನ್ನು ಅರ್ಥಮಾಡಿಕೊಂಡು ಅರಣ್ಯೀಕರಣ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರೆ ಪರಿಸರ ಸಂರಕ್ಷಣೆ ಸಾಧ್ಯವಿದೆ ಎಂದರು.
ವಾಣಿಜ್ಯ ಕೃಷಿಯ ಉದ್ದೇಶದಿಂದ ಮರಗಳನ್ನು ಕಡೆಯಲಾಗುತ್ತಿದೆ. ಆದ್ದರಿಂದ ನದಿ ಮತ್ತು ಕಾಡಿಗೆ ಇರುವ ನೇರ ಸಂಬಂಧವನ್ನು ಅರಿತುಕೊಳ್ಳುವುದು ಇಂದಿನ ತುರ್ತು ಅಗತ್ಯ. ನೀರುಳಿಸುವ ಮತ್ತು ಸುಲಭವಾಗಿ ಗಿಡಬೆಳೆಸುವ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ನೆಡುತೋಪುಗಳನ್ನು ಮಾಡುವಾಗ ಜೀವ ವೈವಿಧ್ಯತೆಗಳನ್ನು ಗಮನದಲ್ಲಿರಿಸಿಕೊಂಡು ಮುಂದುವರೆಯಬೇಕು ಎಂದು ಹೇಳಿದರು.
ನಿಸರ್ಗದಲ್ಲಿ ಸಹಜವಾದ ಸ್ನೇಹವಿದೆ, ಸಹಬಾಳ್ವೆಯಿದೆ. ಅದನ್ನು ಅರ್ಥಮಾಡಿಕೊಳ್ಳುವುದು ಪರಿಸರ ಸಂರಕ್ಷಣೆಯ ಪ್ರಮುಖ ಭಾಗವಾಗಿದೆ. ಕಾನೂನುಗಳ ಬೆಂಬಲವಿಲ್ಲದೆಯೆ ಪರಿಸರ ಸಂರಕ್ಷಣೆಗೆ ಕಾರಣವಾಗಿರುವ ವನವಾಸಿಗಳು, ಕೃಷಿಕರು ಮತ್ತು ಮೂಲಿಕಾ ವೈದ್ಯರು ನಿಜವಾದ ನಿಸರ್ಗ ತಜ್ಞರು. ಅವರ ಅನುಭವ ಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಸೋನಿಯಾ ಯಶೋವರ್ಮ ಅವರು ಮಾತನಾಡಿ, ಯಶೋವರ್ಮ ಅವರು ಬದುಕಿನಲ್ಲಿ ಪರಿಸರ ಪ್ರಜ್ಞೆಯನ್ನು ಅಳವಡಿಸಿಕೊಂಡಿದ್ದರು. ಆ ಪ್ರಜ್ಞೆಯ ಕಾರಣವಾಗಿ ಅವರು ಕಾಲೇಜು ಮತ್ತು ಮನೆಯಲ್ಲಿ ಪರಿಸರ ಸಂರಕ್ಷಣೆಯ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದರು.
ನಾವು ಇತಿಹಾಸದ ಪಾಠಗಳಲ್ಲಿ ಮಹಾನ್ ನಾಗರಿಕತೆಗಳು ಅಳಿದಿರುವುದನ್ನು ಓದುತ್ತೇವೆ. ಅರಣ್ಯ ನಾಶ ಆದ ಕಡೆಗಿನ ಸಾಮ್ರಾಜ್ಯಗಳು ಅಳಿದಿವೆ. ಇದನ್ನು ಕಂಡುಕೊಂಡರೆ ನಾವು ಅರಣ್ಯ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಂಶುಪಾಲ ಡಾ. ಬಿ. ಎ ಕುಮಾರ ಹೆಗ್ಡೆ ಮಾತನಾಡಿದರು. ಮಾನವರ ಅಜ್ಞಾನದ ಪರಿಸರ ವಿರೋಧಿ ಚಟುವಟಿಕೆಗಳು ವಾಯುಮಂಡಲವನ್ನು ಹಾಳುಗೆಡವಿ ಪರಿಸರದ ಅಸಮತೋಲನಕ್ಕೆ ಕಾರಣವಾಗಿವೆ. ಆದ್ದರಿಂದ ಭವಿಷ್ಯದ ಆರೋಗ್ಯಕರ ವಾತವರಣಕ್ಕಾಗಿ ಪರಿಸರ ಪ್ರಜ್ಞೆ ಅಗತ್ಯ ಎಂದು ಹೇಳಿದರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಬೋಜಮ್ಮ ಕೆ. ಎನ್. ವಂದಿಸಿದರು.
