Wed. Feb 26th, 2025

Ujire: ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ “ಕಲರವ” ಅಂತರ್ ಕಾಲೇಜು ಹಾಗೂ ಅಂತ‌ರ್ ತರಗತಿ ಉತ್ಸವ

ಉಜಿರೆ:(ಫೆ.25) ವಿದ್ಯಾರ್ಥಿಗಳು ಜ್ಞಾನ, ಉತ್ತಮ ಮನೋಧೋರಣೆ ಮತ್ತು ಕೌಶಲ ಗಳಿಸಿಕೊಂಡು ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು, ಸಾಧನೆಗೈಯಬೇಕು ಎಂದು ಮೂಡುಬಿದಿರೆಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, ಉಜಿರೆ ಎಸ್ ಡಿ ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿ ಯುವರಾಜ್ ಜೈನ್‌ ಹೇಳಿದರು.

ಇದನ್ನೂ ಓದಿ: ಗುಂಡ್ಯ: ಚಲಿಸುತ್ತಿದ್ದ ಲಾರಿಯಿಂದ ಏಕಾಏಕಿ ಜಿಗಿದು ನಿರ್ವಾಹಕ ಸಾವು

ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಫೆ. 24 ರಂದು ಮಾನವಿಕ ವಿಭಾಗವು ಆಯೋಜಿಸಿದ್ದ ‘ಕಲರವ ‘ ಅಂತರ್ ಕಾಲೇಜು ಹಾಗೂ ಅಂತ‌ರ್ ತರಗತಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಕಾಲಘಟ್ಟದಲ್ಲಿ ಉತ್ತಮ ಬುದ್ಧಿಮತ್ತೆಯ ಹೊರತಾಗಿಯೂ ಜ್ಞಾನ, ಕೌಶಲದ ಅಗತ್ಯವಿದೆ. ಉತ್ತಮ ಮನೋಧೋರಣೆಯೂ ಇದ್ದಲ್ಲಿ ವಿಶೇಷ ಸಾಧನೆಗಳನ್ನು ಮಾಡಬಹುದು. ವಿಜ್ಞಾನ, ಕಲೆ, ವಾಣಿಜ್ಯ ಇತ್ಯಾದಿ ಭೇದ ಮಾಡದೆ, ಯಾವ ಕ್ಷೇತ್ರದಲ್ಲಿ ಮುನ್ನಡೆಯಲು ಸಾಧ್ಯವಿದೆಯೋ ಆ ಕ್ಷೇತ್ರದಲ್ಲಿ ಸ್ವಯಂ ಅಭಿವೃದ್ಧಿಯೊಂದಿಗೆ ಸಾಗಬೇಕು ಎಂದು ಅವರು ಹೇಳಿದರು.

“ಬದುಕಿನ ಹಾದಿಯಲ್ಲಿ ಮುಳ್ಳುಗಳು ಸಹಜ ಅದನ್ನು ಹೂವಿನ ಹಾಸಿಗೆಯನ್ನಾಗಿ ಬದಲಾಯಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಟೀಕೆಗಳನ್ನು ಪರಿಶೀಲಿಸಿ. ಟೀಕೆಗಳು ನಿಮಗೆ ಅನ್ವಯವಾಗುತ್ತಿದ್ದರೆ ನಿಮ್ಮಲ್ಲಿ ಬದಲಾವಣೆ ತಂದುಕೊಳ್ಳಿ; ಇಲ್ಲವಾದರೆ ಸುಮ್ಮನಿದ್ದುಬಿಡಿ. ಸಣ್ಣ ಸಣ್ಣ ಬದಲಾವಣೆಗಳಿಂದ ದೊಡ್ಡ ಬದಲಾವಣೆ ಸಾಧ್ಯವಾಗುತ್ತದೆ. ಕಲೆ, ಸಂಗೀತ, ಸಾಹಿತ್ಯ ಕ್ಷೇತ್ರಗಳಲ್ಲೂ ತೊಡಗಿಕೊಳ್ಳಿ. ಕಲಿಯುವ ವಯಸ್ಸಿನಲ್ಲಿ ಕಲಿಯಿರಿ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

“ಎಸ್.ಡಿ.ಎಂ. ಸಂಸ್ಥೆಯು ಬದುಕಿಗೆ ಬೇಕಾದ ಎಲ್ಲಾ ರೀತಿಯ ಗುಣಗಳನ್ನು ಕಲಿಸಿಕೊಡುತ್ತದೆ ಹಾಗೂ ಪ್ರತಿಭೆಗೆ ತಕ್ಕ ಪ್ರೋತ್ಸಾಹವನ್ನು ನೀಡುತ್ತದೆ. ಇಂದಿನ ನನ್ನೆಲ್ಲಾ ಸಾಧನೆ ಹಾಗೂ ಏಳಿಗೆಗೆ ಸಂಸ್ಥೆ ಕಲಿಸಿಕೊಟ್ಟ ಪಾಠಗಳೇ ಕಾರಣ” ಎಂದರು.

ಮುಖ್ಯ ಅತಿಥಿ, ಉದ್ಯಮಿ ಮಹೇಂದ್ರ ವರ್ಮ ಜೈನ್ ಮಾತನಾಡಿದರು. ತಮ್ಮ ಉದ್ಯಮಶೀಲತೆಗೆ ರುಡ್ಸೆಟ್ ಸಂಸ್ಥೆಯ ತರಬೇತಿ ಒದಗಿಸಿದ ನೆರವನ್ನು ಸ್ಮರಿಸಿಕೊಂಡರು.

“ಯಶಸ್ಸು ಲಭಿಸಿದಾಗ ಅತಿಯಾಗಿ ಹಿಗ್ಗದೆ, ಕೆಲಸದಲ್ಲಿ ಗುಣಮಟ್ಟ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಉದ್ಯಮಿಗಳಿಗೆ ಪರಿಸ್ಥಿತಿ ಸದಾ ಒಂದೇ ಆಗಿರುವುದಿಲ್ಲ. ಜೀವನ ನಿರ್ವಹಣೆಗೆ ಪರ್ಯಾಯ ದಾರಿಗಳನ್ನು ಸಜ್ಜಾಗಿರಿಸಿಕೊಂಡಿರಬೇಕು. ದೇಶಕ್ಕೆ ಉತ್ತಮ ಪ್ರಜೆಗಳಾಗಿ, ಪ್ರಾಮಾಣಿಕ ತೆರಿಗೆದಾರರಾಗಿ, ರಾಷ್ಟ್ರೀಯತೆಗೆ ಬದ್ಧರಾಗಿ ಬದುಕಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, “ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸಹಿತ ಬದುಕಿನ ಎಲ್ಲ ಸ್ತರಗಳಲ್ಲಿ ಸುದೃಢರಾಗಿ, ತಮ್ಮಲ್ಲಿರುವ ಕೌಶಲ, ಸಾಮರ್ಥ್ಯವನ್ನು ಗುರುತಿಸಿ ಸಮರ್ಥ ರೀತಿಯಾಗಿ ಉಪಯೋಗಿಸಿಕೊಂಡು ಬದುಕಬೇಕು” ಎಂದರು.

ಇದೇ ಸಂದರ್ಭದಲ್ಲಿ, 2024 ರಲ್ಲಿ ನಡೆದ ಇಂಡೋ – ನೇಪಾಳ್ ಅಂತರರಾಷ್ಟ್ರೀಯ ಥ್ರೋ ಬಾಲ್ ಪಂದ್ಯದಲ್ಲಿ ಚಿನ್ನದ ಪದಕ ಗೆದ್ದ ತೃತೀಯ ಬಿ.ಎ. ವಿದ್ಯಾರ್ಥಿನಿ ಉಷಾ ಕೆ.ಜಿ. ಅವರನ್ನು ಗೌರವಿಸಲಾಯಿತು.

ಪ್ರಾಂಶುಪಾಲರು ಹಾಗೂ ಅತಿಥಿಗಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕಾಲೇಜಿನ ಆಡಳಿತಾಂಗ ಕುಲಸಚಿವ ಡಾ. ಶ್ರೀಧರ ಭಟ್, ಕಲಾ ನಿಕಾಯದ ಡೀನ್ ಡಾ. ಭಾಸ್ಕರ ಹೆಗಡೆ, ವಿದ್ಯಾರ್ಥಿ ಪ್ರತಿನಿಧಿಗಳಾದ ಅಮೀರ್ ಮತ್ತು ವೀಕ್ಷಾ ಉಪಸ್ಥಿತರಿದ್ದರು.

ಸುದೀಕ್ಷಾ ಮತ್ತು ತಂಡದವರು ಪ್ರಾರ್ಥಿಸಿದರು. ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿ ಡಾ. ಸನ್ಮತಿ ಕುಮಾರ್ ಸ್ವಾಗತಿಸಿದರು. ಮಾನಸ ಅಗ್ನಿಹೋತ್ರಿ ಕಾರ್ಯಕ್ರಮ ನಿರೂಪಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ 10 ಕಾಲೇಜುಗಳಿಂದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು