ಕುಂದಾಪುರ:(ಜು.17) ಪತಿ,ಪತ್ನಿ ಪರಸ್ಪರ ಜಗಳವಾಡಿಕೊಂಡು ಠಾಣೆಯಲ್ಲಿ ಇತ್ಯರ್ಥವಾಗಿ ವಾಪಸು ಮನೆಗೆ ತೆರಳುತ್ತಿದ್ದ ವೇಳೆ ಪತಿ ಹೊಳೆಗೆ ಹಾರಿ ನಾಪತ್ತೆಯಾದ ಘಟನೆ ಜು. 16 ರಂದು ಮಂಗಳವಾರ ಕುಂದಾಪುರ ತಾಲೂಕಿನ ಕಂಡ್ಲೂರುನಲ್ಲಿ ನಡೆದಿದೆ.
ಇದನ್ನೂ ಓದಿ:https://uplustv.com/2024/07/17/daily-horoscope-today-this-rashi-will-get-angry
ಹೊಳೆಗೆ ಹಾರಿ ನಾಪತ್ತೆಯಾದ ವ್ಯಕ್ತಿ ಕಾಳಾವರ ಗ್ರಾಮದ ಅಂಗನವಾಡಿ ಸಮೀಪದ ನಿವಾಸಿ ಹರೀಶ್ ಭೋವಿ(44) ಎಂದು ಗುರುತಿಸಲಾಗಿದೆ.
ಹರೀಶ್ ವೃತ್ತಿಯಲ್ಲಿ ಛಾಯಾಗ್ರಾಹಕರಾಗಿದ್ದು, ಪ್ರೀತಿಸಿ ಮದುವೆಯಾಗಿದ್ದ ಇವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಹಿರಿಮಗಳು ಮೂರನೇ ತರಗತಿ ಹಾಗೂ ಕಿರಿಯವಳು ಅಂಗನವಾಡಿಗೆ ಹೋಗುತ್ತಿದ್ದಾರೆ.
ಹರೀಶ್ ಆಗಾಗ ಮನೆಯಲ್ಲಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದರೆನ್ನಲಾಗಿದೆ. ಮಂಗಳವಾರ ಬೆಳಿಗ್ಗೆ ಜಗಳ ತಾರಕಕ್ಕೇರಿ ಮಕ್ಕಳನ್ನು ಬಾವಿಗೆ ದೂಡಲೆತ್ನಿಸಿದ್ದರು ಎನ್ನಲಾಗಿದೆ. ಇದರಿಂದ ಆತಂಕಗೊಂಡಿದ್ದ ಅವರ ಪತ್ನಿ ಕಂಡ್ಲೂರು ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಆ ದೂರಿನಂತೆ ಇಂದು ದಂಪತಿಯನ್ನು ಠಾಣೆಗೆ ಕರೆಸಿ ಪಂಚಾಯಿತಿ ಮಾಡಿ ಆಟೋದಲ್ಲಿ ಕಳಿಸಿದ್ದರು. ಠಾಣೆಯಿಂದ ಬರುತ್ತಿದ್ದ ವೇಳೆ ಕಂಡ್ಲೂರು ಸೇತುವೆ ಸಮೀಪ ಆಟೋ ಚಾಲಕನಿಗೆ ರಿಕ್ಷಾ ನಿಧಾನಿಸುವಂತೆ ತಿಳಿಸಿದ ಹರೀಶ್ ವಾರಾಹಿ ಹೊಳೆಗೆ ಸೇತುವೆಯಿಂದ ಹಾರಿ ನಾಪತ್ತೆ ಆಗಿದ್ದಾನೆ.
ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕಾಗಮಿಸಿದ ಸ್ಥಳೀಯರು, ಪೊಲೀಸರು, ಅಗ್ನಿಶಾಮಕದಳ, ಮುಳುಗುತಜ್ಞರು ಹರೀಶ್ ಪತ್ತೆಗೆ ಶೋಧ ಕಾರ್ಯದಲ್ಲಿ ತೊಡಗಿದರು. ಆದರೆ ವಿಪರೀತ ಮಳೆ, ಉಕ್ಕಿ ಹರಿಯುತ್ತಿರುವ ನದಿ ನೀರಿನಲ್ಲಿ ಪತ್ತೆ ಕಾರ್ಯ ಸಫಲವಾಗಿಲ್ಲ.
ಕಂಡ್ಲೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ.