ಧರ್ಮಸ್ಥಳ:(ಫೆ. 28) ಶ್ರೀ ಮಂಜುನಾಥ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ವ್ಯಾಪಾರ ಮೇಳವು ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಧರ್ಮಸ್ಥಳ ಬೀಡು ವಿನ ಮ್ಯಾನೇಜರ್ ಆಗಿರುವ ಶ್ರೀ ಸುರೇಂದ್ರ ಜೈನ್ ಅವರು ಪ್ರಾಥಮಿಕ ಶಾಲಾ ಹಂತದಲ್ಲಿಯೇ ನಿಖರವಾದ ತೂಕ, ಲಾಭ- ನಷ್ಟದ ವಿಚಾರಗಳು ಮಕ್ಕಳ ಬುದ್ಧಿಶಕ್ತಿಯನ್ನು ಚುರುಕಾಗಿಸುವುದರೊಂದಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಗಿದ್ದು, ಶಾಲೆಯಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಶಿಕ್ಷಣದ ಜೊತೆ ಜೊತೆಗೆ ವ್ಯಾವಹಾರಿಕ ಜ್ಞಾನ ಲಭಿಸುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ದೇವಳದ ಮಣೆಗಾರರಾದ ಶ್ರೀ ವಸಂತ ಭಟ್ ವಿದ್ಯಾರ್ಥಿಗಳು ತಾವು ಖರೀದಿಸುವ ವಸ್ತುಗಳ ನಿಖರವಾದ ಬೆಲೆ, ಕಾಲಕಾಲಕ್ಕೆ ಅವುಗಳಲ್ಲಾಗುವ ಏರಿಕೆ ಇಳಿಕೆಗಳ ಬಗ್ಗೆ ತಿಳಿದುಕೊಂಡು, ವ್ಯಾಪಾರಿಗಳೊಂದಿಗೆ ಚರ್ಚಿಸಿ ವ್ಯಾಪಾರದಲ್ಲಾಗುವ ಮೋಸವನ್ನು ತಡೆಯಲು ಕಲಿತುಕೊಳ್ಳಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕಮಲ್ ತೇಜು ರಜಪೂತ್ ವಹಿಸಿಕೊಂಡು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ ವಿಷಯದ ಜೊತೆಗೆ ವ್ಯಾಪಾರ ಮೇಳದಂತಹ ಕಾರ್ಯಕ್ರಮಗಳು ಸಹಕಾರಿ ಎಂದರು. ಹಿರಿಯ ಶಿಕ್ಷಕರಾದ ಶ್ರೀ ಜೋಸೆಫ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಶ್ರೀಮತಿ ಕಾವ್ಯ ಸ್ವಾಗತಿಸಿ, ಶ್ರೀಮತಿ ಸೀಮಾರವರು ಧನ್ಯವಾದವಿತ್ತ ಕಾರ್ಯಕ್ರಮವನ್ನು ಶ್ರೀಮತಿ ಪೂರ್ಣಿಮಾ ಕೆ. ಎಂ ನಿರೂಪಿಸಿದರು.

ವಿದ್ಯಾರ್ಥಿಗಳ ಮನೆಯಲ್ಲಿ ಬೆಳೆದ ಸಾವಯವ ತರಕಾರಿಗಳು, ಹಣ್ಣುಗಳು, ವಿವಿಧ ಹೂವಿನಗಿಡಗಳು, ಹಣ್ಣಿನ ಗಿಡಗಳು,ಅಕ್ವೇರಿಯಂ, ರುಚಿಕರವಾದ ಬೀಟ್ರೂಟ್ ರೊಟ್ಟಿ, ಬಗೆಬಗೆಯ ಜ್ಯೂಸ್ ಗಳು,ರಾಜಸ್ಥಾನಿ ಆಲೂ ಚಾಟ್, ಮ್ಯಾಂಗೋ ಲಸ್ಸಿ, ಚುರುಮುರಿ, ಗ್ರಾಹಕರ ಮನಸ್ಸನ್ನು ಗೆದ್ದಿತು.

