ಧರ್ಮಸ್ಥಳ :(ಮಾ.1) “ವಿಜ್ಞಾನ ಜ್ಞಾನ ಕೊಡುತ್ತದೆ, ಪ್ರಬುದ್ಧತೆ ಜೀವನ ಕಟ್ಟಿಕೊಡುತ್ತದೆ” ಎಂಬ ಮಾತನ್ನು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಯುತ ಪಿ ಶ್ರೀನಿವಾಸ್ ರಾವ್ ಇವರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ 2 ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಯನ್ನು ತಮ್ಮ ಶುಭನುಡಿಯೊಂದಿಗೆ ಮತ್ತು ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀಯುತ ನಂದ ಕೆ ಇವರು ಜೊತೆಯಾಗಿ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಇದನ್ನೂ ಓದಿ: ⭕ಸುಳ್ಯ: ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ನೊಬೆಲ್ ಪುರಸ್ಕೃತ ಸರ್ ಸಿ ವಿ ರಾಮನ್ ಅವರ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸುತ್ತಿದ್ದೇವೆ. ಈ ಪ್ರಯುಕ್ತ ಶಾಲೆಯಲ್ಲಿ ಶಾಲಾ ಮಕ್ಕಳು ತಮ್ಮ ಪ್ರತಿಭೆಯನ್ನು ವಿಭಿನ್ನವಾದ ಪ್ರಯೋಗದ ಮಾದರಿಗಳನ್ನು ತಯಾರಿಸುವ ಮೂಲಕ ಪ್ರಾಯೋಗಿಕವಾಗಿ ಪ್ರದರ್ಶನ ಮಾಡಿ ಮಾಹಿತಿಯನ್ನು ನೀಡಿದರು.
ನೀರಿನ ಶುದ್ಧೀಕರಣ ಘಟಕದ ಮಾದರಿ, ರಿಮೋಟ್ ಕಾರ್, ಡ್ರಿಲ್ಲಿಂಗ್ ಮಿಷನ್, ಜ್ವಾಲಾಮುಖಿಯ ಪ್ರಯೋಗ, ನ್ಯೂಟನ್ ಚಕ್ರ, ವ್ಯಾಕ್ಯೂಮ್ ಕ್ಲೀನರ್, ಸರಕು ಸಾಗಣೆಯ ಹಡಗು, ತ್ರೀ ಡಿ ಹೋಲೋಗ್ರಾಮ್,ಆಮ್ಲ- ಪ್ರತ್ಯಾಮ್ಲದ ಪ್ರಯೋಗಗಳು,ನೀರಿನಲ್ಲಿ ವಿದ್ಯುತ್ ಹರಿಯುವಿಕೆ, ಗಾಳಿಗೆ ತೂಕವಿದೆ, ಮಾಡರ್ನ್ ಸಿಟಿ ಮುಂತಾದ ಹಲವು ಪ್ರಯೋಗಗಳನ್ನು ಶಿಕ್ಷಕರ ಮಾರ್ಗದರ್ಶನದ ಮೂಲಕ ಮಕ್ಕಳು ತಯಾರಿಸಿದರು.



ಈ ವಿಶೇಷ ಕಾರ್ಯಕ್ರಮದಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಿ ಹುರಿದುಂಬಿಸಲು ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಯುತ ಹರೀಶ್ ಸುವರ್ಣ, ಶ್ರೀಮತಿ ಭಾರತಿ, ಶ್ರೀಯುತ ವಸಂತ ನಾಯ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಯುತ ದಿನೇಶ್, ಪಂಚಾಯತ್ ಸಿಬ್ಬಂದಿ ಶ್ರೀಯುತ ದೇವಿ ಪ್ರಸಾದ್ ಬೊಳ್ಮ,

ಗೌರವ ಸಲಹೆಗಾರರಾದ ಶ್ರೀಯುತ ರಾಜೇಂದ್ರ ಅಜ್ರಿ, ಧರ್ಮಸ್ಥಳ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕರು ಮತ್ತು ಗೌರವ ಸಲಹೆಗಾರರಾದ ಶ್ರೀಯುತ ನೀಲಕಂಠ ಶೆಟ್ಟಿ, ಎಸ್‌ಡಿಎಂಸಿ ಸದಸ್ಯರು, ಪೋಷಕರು, ಎಸ್‌ಡಿಎಂ ಕಾಲೇಜಿನ ಎಂ ಎಸ್ ಡಬ್ಲ್ಯೂ ವಿದ್ಯಾರ್ಥಿಗಳು, ಶಿಕ್ಷಕ ವೃಂದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕರು ಶ್ರೀಮತಿ ಪುಷ್ಪಾ ಎನ್ ಕಾರ್ಯಕ್ರಮ ನಿರೂಪಣೆಯನ್ನು ಮಾಡಿ, ಬಂದವರನ್ನು ಸ್ವಾಗತಿಸಿ, ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.
