ಉಜಿರೆ:(ಮಾ.4)ಉಜಿರೆ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದಲ್ಲಿ ಭೌತಶಾಸ್ತ್ರ ಅಧ್ಯಯನ ವಿಭಾಗ ಮತ್ತು ಪದವಿ ಭೌತಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಮಾರ್ಚ್ 1, 2025 ರಂದು “ಕ್ವಾಂಟಮ್ ಟು ಕಾಸ್ಮೊಸ್” ಉಪನ್ಯಾಸ ಸರಣಿ ಆಯೋಜಿಸುವ ಮೂಲಕ ರಾಷ್ಟ್ರೀಯ ವಿಜ್ಞಾನ ದಿನ 2025 ಅನ್ನು ಆಚರಿಸಲಾಯಿತು.


ಇದನ್ನೂ ಓದಿ: ಬೆಳ್ತಂಗಡಿ : ಸಿಯೋನ್ ಆಶ್ರಮಕ್ಕೆ ಮೂಡಿಗೆರೆಯ ಕೂಲಿ ಕಾರ್ಮಿಕರ ತಂಡ ಭೇಟಿ
ಕಾರ್ಯಕ್ರಮದಲ್ಲಿ ಐಐಟಿ ದೆಹಲಿಯಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಡಾ. ವಿ. ರವಿಶಂಕರ್ ಕ್ವಾಂಟಮ್ ಮಾಹಿತಿಗೆ ಆಹ್ವಾನ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ಕ್ವಾಂಟಮ್ ಮಾಹಿತಿಯ ಪ್ರಾಮುಖ್ಯತೆ, ಪಾತ್ರ ಮತ್ತು ಮುಂದಿನ ದಿನಗಳಲ್ಲಿ ಅದರ ಪರಿಣಾಮಗಳನ್ನು ಕುರಿತಾಗಿ ಅವರು ಚರ್ಚಿಸಿದರು.
ಮಣಿಪಾಲ ನೈಸರ್ಗಿಕ ವಿಜ್ಞಾನ ಕೇಂದ್ರ ಮಾಹೆ, ನಿರ್ದೇಶಕ ಡಾ.ಪಿ. ಶ್ರೀಕುಮಾರ್ ಭಾರತದಲ್ಲಿ ಮುಂಬರುವ ಖಗೋಳಶಾಸ್ತ್ರದ ಪ್ರಮುಖ ಯೋಜನೆಗಳು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ ಮಾತನಾಡಿದರು. ಅವರು ವೀಕ್ಷಣೆ-ಆಧಾರಿತ ಖಗೋಳಶಾಸ್ತ್ರದ ಮೂಲ ಪರಿಕಲ್ಪನೆಗಳು ಮತ್ತು ಈ ಕ್ಷೇತ್ರದಲ್ಲಿ ಸಂಶೋಧನೆಯ ಪ್ರಮುಖ ಆಯಾಮಗಳ ಬಗ್ಗೆ ವಿವರಿಸಿದರು.


ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಾಘವೇಂದ್ರ ಎಸ್ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವಸಂಸ್ಥೆಯು ಈ ವರ್ಷವನ್ನು ಅಂತಾರಾಷ್ಟ್ರೀಯ ಕ್ವಾಂಟಮ್ ವಿಜ್ಞಾನ ಮತ್ತು ತಂತ್ರಜ್ಞಾನ ವರ್ಷ ಎಂದು ಘೋಷಿಸಿದೆ ಮತ್ತು ಮುಂಬರುವ ವರ್ಷಗಳಲ್ಲಿ ಭೌತಶಾಸ್ತ್ರವು ಮಹತ್ವದ ಸ್ಥಾನ ಪಡೆಯಲಿದೆ ಎಂದು ಅವರು ಹೇಳಿದರು. ಎಸ್‌ಡಿಎಂ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ಅಪೇಕ್ಷಾ ಜೈನ್ ಉಪಸ್ಥಿತರಿದ್ದರು. ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

