Mon. Mar 10th, 2025

Puttur: ನಾದಿನಿ, ಅತ್ತೆ, ಇಬ್ಬರು ಮಕ್ಕಳನ್ನು ಕೊಂದ ಪ್ರಕರಣ – ಆರೋಪಿಗೆ ಸುಪ್ರೀಂ ಕೋರ್ಟ್‌ ನೀಡಿದ ಶಿಕ್ಷೆಯೇನು ಗೊತ್ತಾ?!

ಪುತ್ತೂರು:(ಮಾ.6) ತನ್ನ ನಾದಿನಿ ಹಾಗೂ ಅತ್ತೆಯನ್ನು ಕುತ್ತಿಗೆಗೆ ಹಗ್ಗ ಬಿಗಿದು ಕೊಲೆಗೈದು ಎರಡು ದಿನಗಳ ಬಳಿಕ ತನ್ನ ಪುಟ್ಟ ಮಕ್ಕಳಿಬ್ಬರನ್ನು ಪಾಣಾಜೆ ಬಳಿ ಕೆರೆಗೆ ದೂಡಿ ಹಾಕಿ ಕೊಲೆ ಮಾಡಿದ್ದ ಪಾಣಾಜೆಯ ರಮೇಶ್‌ ನಾಯ್ಕನಿಗೆ ನೀಡಿರುವ ಶಿಕ್ಷೆಯನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್‌ ಮರಣದಂಡನೆ ಶಿಕ್ಷೆಯನ್ನು ಮಾರ್ಪಡಿಸಿ ಆತನ ಆಯುಷ್ಯದ ಕೊನೆಯ ತನಕವೂ ಜೈಲಲ್ಲಿಯೇ ಇರುವಂತೆ ಆದೇಶಿಸಿದೆ.

ಇದನ್ನೂ ಓದಿ: 🛑Sullia: ನಂದಿನಿ ಸ್ಟಾಲ್‌ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಕಂಟೈನರ್

ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಕರ್ನಾಟಕ ಹೈಕೋರ್ಟ್‌ ಇದನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ರಮೇಶ್‌ ನಾಯ್ಕ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ಮರಣ ದಂಡನೆಯಿಂದ ಪಾರು ಮಾಡುವಂತೆ ಕೋರಿದ್ದ.

ಏನಿದು ಪ್ರಕರಣ?
ಪಾಣಾಜೆ ಅರ್ಧಮೂಲೆಯ ಕೃಷ್ಣ ನಾಯ್ಕರ ಮಗ, ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಮ್ಯಾನೇಜರ್‌ ಆಗಿದ್ದ ರಮೇಶ್‌ ನಾಯ್ಕ (40) ತನ್ನ ಮಕ್ಕಳಾದ ಭುವನರಾಜ್‌ (10) ಮತ್ತು (3)ಅವರನ್ನು ಪಾಣಾಜೆ ಬಳಿ ಕೆರೆಗೆ ದೂಡಿ ಹಾಕಿ ಕೊಲೆ ಮಾಡಿದ್ದ. ಅದಕ್ಕಿಂತ ಎರಡು ದಿನದ ಮೊದಲು ತನ್ನ ಅತ್ತೆ ಮುಂಡೂರು ಗ್ರಾಮದ ಪಂಜಳ ಸಮೀಪದ ಉದಯಗಿರಿಯವರಾಗಿದ್ದ ಸರಸ್ವತಿ (60) ಹಾಗೂ ನಾದಿನಿ ಸವಿತಾ (28) ಅವರನ್ನು ತುಮಕೂರಿನಲ್ಲಿ ಕೊಲೆ ಮಾಡಿದ್ದ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದ ತುಮಕೂರು ಮತ್ತು ಪುತ್ತೂರು ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಶನ್‌ ಪರವಾದ ಆಲಿಸಿದ ತುಮಕೂರು ಜಿಲ್ಲಾ ನ್ಯಾಯಾಲಯ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರೆ, ಪುತ್ತೂರು ನ್ಯಾಯಾಲಯ ಮರಣ ದಂಡನೆ ವಿಧಿಸಿ ತೀರ್ಪು ನೀಡಿತ್ತು.

ಮಕ್ಕಳನ್ನು ಕೊಲೆ ಮಾಡಿರುವ ಆರೋಪ ಸಾಬೀತಾಗಿದೆ ಎಂದು ಜಿಲ್ಲಾ ಐದನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಟಿ.ಜಿ. ಶಿವಶಂಕರೇ ಗೌಡ ಅವರು ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ 2013ರಲ್ಲಿ ತೀರ್ಪು ನೀಡಿದ್ದರು. ಆ ಸಂದರ್ಭ ಸರಕಾರದ ಪರ ಸರಕಾರಿ ಅಭಿಯೋಜಕ, ಪ್ರಸ್ತುತ ಮಂಗಳೂರು ವಿಭಾಗದ ಹಿರಿಯ ಕಾನೂನು ಅ ಧಿಕಾರಿಯಾಗಿದ್ದ ಕೆ. ಶಿವಪ್ರಸಾದ್‌ ಆಳ್ವ ಅವರು ವಾದಿಸಿದ್ದರು. ಮಕ್ಕಳೆಂದರೆ ದೇವರ ಸಮಾನ. ತನ್ನ ಸ್ವಂತ ಮಕ್ಕಳನ್ನೇ ಕೊಂದ ಈ ಪ್ರಕರಣ ಅತೀ ಘೋರವಾಗಿದ್ದು ಇದನ್ನು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಪರಿಗಣಿಸಿ ಆತನಿಗೆ ಮರಣದಂಡನೆಗಿಂತ ಕಡಿಮೆ ಯಾವ ಶಿಕ್ಷೆಯನ್ನೂ ನೀಡಬಾರದು ಎಂದು ವಾದ ಮಂಡಿಸಿದ್ದರು.

ಕೊನೆಯದಾಗಿ ಅಪರಾಧಿಯು ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸುವಂತೆ ಸುಪ್ರೀಂ ಕೋರ್ಟಿಗೆ ಮೊರೆಹೋಗಿದ್ದ. ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್‌, ಸಂಜಯ್‌ ಕರೋಲ್‌ ಮತ್ತು ಸಂದೀಪ್‌ ಮೆಹ್ತಾ ಅವರನ್ನೊಳಗೊಂಡ ನ್ಯಾಯ ಪೀಠವು ಮೇಲ್ಮನವಿಯ ವಿಚಾರಣೆ ನಡೆಸಿತು. ಅಪರಾಧದ ಅನಾಗರಿಕತೆ ಮತ್ತು ತಮ್ಮ ತಂದೆಯಿಂದ ಕೊಲ್ಲಲ್ಪಟ್ಟ ಮಕ್ಕಳ ಅಸಹಾಯಕತೆಯನ್ನು ನ್ಯಾಯಪೀಠ ಒಪ್ಪಿಕೊಂಡಿತು. ಆದಾಗ್ಯೂ ಮೇಲ್ಮನವಿದಾರನಿಗೆ ಯಾವುದೇ ಕ್ರಿಮಿನಲ್‌ ಹಿನ್ನೆಲೆಗಳಿಲ್ಲ ಮತ್ತು ಮೃತ ವ್ಯಕ್ತಿಗಳೊಂದಿಗೆ ಘಟನೆಗೆ ಮೊದಲು ಆತ ಉತ್ತಮ ಸಂಬಂಧ ಹೊಂದಿದ್ದ. ಆದರೆ ಇವುಗಳನ್ನು ವಿಚಾರಣಾ ನ್ಯಾಯಾಲಯಗಳು ಪರಿಗಣಿಸಲಿಲ್ಲ. ಅಪರೂಪದಲ್ಲೇ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಮರಣದಂಡನೆ ವಿಧಿಸಬೇಕು ಎಂದು ಒತ್ತಿ ಹೇಳಿದ ನ್ಯಾಯಪೀಠ ಶಿಕ್ಷೆಯ ಮಾರ್ಪಾಡು ಮಾಡಿ, “ಗಲ್ಲಿನ ಕುಣಿಕೆಯನ್ನು ಶಿಕ್ಷಿತನ ಕುತ್ತಿಗೆಯಿಂದ ತೆಗೆಯಬೇಕು ಮತ್ತು ಸರ್ವಶಕ್ತ ದೇವರು ನೀಡಿದ ಆತನ ಬದುಕಿನ ಕೊನೆಯ ದಿನಗಳ ವರೆಗೂ ಜೈಲಿನಲ್ಲಿಯೇ ಇರಬೇಕು” ಎಂದು ನಿರ್ದೇಶಿಸಿದೆ.

Leave a Reply

Your email address will not be published. Required fields are marked *