ಬೆಳ್ತಂಗಡಿ:(ಮಾ.8) ಅಭಿವೃದ್ಧಿಗೆ ಒತ್ತು ನೀಡದ, ಸಾಲದ ಹೊರೆಯನ್ನು ಹೆಚ್ಚಿಸುವ, ಅಲ್ಪಸಂಖ್ಯಾತರನ್ನು ಓಲೈಸುವ ಬಜೆಟ್ ಇದಾಗಿದೆ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಟೀಕಿಸಿದ್ದಾರೆ.

ಇದನ್ನೂ ಓದಿ: ⭕ಬಂಟ್ವಾಳ: ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ
ಸಾಲ ಮಾಡಿ ಬಜೆಟ್ ಗಾತ್ರವನ್ನು ಹಿಗ್ಗಿಸಲಾಗಿದೆ. ಶಾಶ್ವತ ಯೋಜನೆಗಳನ್ನು ಆಯವ್ಯಯದಿಂದ ತೆಗೆದುಹಾಕಲಾಗಿದೆ. ಮತಬ್ಯಾಂಕ್ ಆಧಾರಿತ, ರಾಜ್ಯದ ಆರ್ಥಿಕ ಶಿಸ್ತನ್ನು ಹಾಳುಗೆಡುವ ಬಜೆಟ್ ಇದಾಗಿದೆ.


ಕೌಶಲ್ಯ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಕಡೆಗೆಣಿಸಲಾಗಿದ್ದು ಮತ್ತು ರೈತ ವಿರೋಧಿಯಾಗಿದ್ದು, ಸಾಂಸ್ಕೃತಿಕ ವಲಯ, ಪ್ರವಾಸೋದ್ಯಮವನ್ನು ನಿರ್ಲಕ್ಷಿಸಲಾಗಿದೆ. ಎಸ್.ಸಿ, ಎಸ್.ಟಿ., ಮತ್ತು ಓಬಿಸಿ ಗಳು ತಮ್ಮ ಆರ್ಥಿಕ ಸದೃಢತೆಯತ್ತ ಸಾಗಲು ನೀರಸ ಬಂಡವಾಳ ಒದಗಿಸಲಾಗಿದೆ.

ವಕ್ಫ್ ಆಸ್ತಿಯ ರಕ್ಷಣೆಗಾಗಿ 150 ಕೋಟಿ ಅನುದಾನ ಮೀಸಲಿರಿಸಿದ್ದೇ ಅಲ್ಲದೆ ಮುಸ್ಲಿಮರಿಗಷ್ಟೇ ಸರಕಾರಿ ಗುತ್ತಿಗೆಯಲ್ಲಿ ಮೀಸಲು ನೀಡಿರುವುದು, ತಸ್ತೀಕ್ ಹೆಚ್ಚಿಸದೆ, ಮುಲ್ಲಾ, ಇಮಾಮ್ ಗಳಿಗೆ ಗೌರವಧನ ಹೆಚ್ಚಿಸುವ ಮೂಲಕ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿದೆ. ಕನ್ನಡಿಯೊಳಗಿನ ಗಂಟಿನೊಳಗೆ ಭ್ರಮೆಯಲ್ಲಿರುವ ಬಂಡವಾಳವಿಲ್ಲದ ಬಡಾಯಿ ಬಜೆಟ್ ನ್ನು ಮುಖ್ಯಮಂತ್ರಿಗಳು ಮಂಡಿಸಿದ್ದಾರೆ.

ಆಯವ್ಯಯ ಗಾತ್ರದಲ್ಲಿ ಶೇ. 27 ಸಾಲ ವೆಚ್ಚದಲ್ಲಿ ಶೇ. 18 ಬಡ್ಡಿಗೆ ಹೋಗಿದೆ. ಒಟ್ಟಾರೆ ಆಯವ್ಯಯದಲ್ಲಿ ಶೇ. 45 ರಷ್ಟು ಸಾಲದ ಹೊರೆ ಇದೆ. ಶಿಕ್ಷಣದ ಯೋಜನೆಗಳನ್ನು ಕಡೆಗಣಿಸಿದೆ. ಬರಗಾಲ, ಕುಡಿಯುವ ನೀರು, ಬೆಳೆಹಾನಿ ಪರಿಹಾರ ಇವುಗಳ ಬಗ್ಗೆ ಚಕಾರವೆತ್ತದೆ, ಅರೆಕಾಲಿಕ ಉಪನ್ಯಾಸಕರ ಮತ್ತು ಇತರೆ ಗುತ್ತಿಗೆ ನೌಕರರಿಗೆ ಆಸಕ್ತಿ ವಹಿಸದೆ, ಲಕ್ಷಾಂತರ ಹಾಲು ಉತ್ಪಾದಕ ರೈತ ಬಾಂಧವರಿಗೆ ಬಾಕಿ ಇರುವ ಪ್ರೋತ್ಸಾಹ ಧನದ ಬಗ್ಗೆ ಮಾತನಾಡದೆ, ಕೇಂದ್ರದ ಮೇಲೆ ಗೂಬೆ ಕೂರಿಸುವ ಚಾಳಿಯನ್ನು ಮುಖ್ಯಮಂತ್ರಿಯವರು ಮುಂದುವರೆಸಿದ್ದಾರೆ.
