ಉಜಿರೆ:(ಮಾ.11) ರಾಷ್ಟ್ರೀಯ ಮಾನ್ಯತಾ ಮಂಡಳಿಯ ನಿಯಮದಂತೆ ವೈದ್ಯಕೀಯ ಸೇವೆ ನೀಡುತ್ತಿರುವ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ರಾಷ್ಟ್ರೀಯ ಆಸ್ಪತ್ರೆಗಳ ಮಾನ್ಯತಾ ಮಂಡಳಿಯಿಂದ 2ನೇ ಬಾರಿಗೆ ಎನ್.ಎ.ಬಿ.ಹೆಚ್ ಪ್ರಮಾಣಪತ್ರ ದೊರೆತಿದೆ.

ಇದನ್ನೂ ಓದಿ: ⭕ಉಪ್ಪಿನಂಗಡಿ: ಉಪ್ಪಿನಂಗಡಿ ನದಿಯಲ್ಲಿ ಶವ ಪತ್ತೆ!!
ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ. ಹೆಗ್ಗಡೆಯವರು ಎನ್.ಎ.ಬಿ.ಹೆಚ್ ಪ್ರಮಾಣಪತ್ರವನ್ನು ಮಾ.10 ರಂದು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದು, ಆಸ್ಪತ್ರೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಆಶಯದಂತೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ, ಹೆಗ್ಗಡೆ ಪರಿವಾರದ ಎಲ್ಲರ ಸಹಕಾರದಲ್ಲಿ ಆಸ್ಪತ್ರೆಯು ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ನೀಡುತ್ತಿದೆ.

ಗ್ರಾಮೀಣ ಜನತೆ ನಗರದ ಹೈಟೆಕ್ ವೈದ್ಯಕೀಯ ಸೇವೆಯಿಂದ ವಂಚಿತರಾಗದಂತೆ ವಿವಿಧ ಸೌಲಭ್ಯಗಳನ್ನು ಇಲ್ಲಿ ನೀಡಲಾಗುತ್ತಿದೆ.
ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳು, ಯಶಸ್ವಿ ಶಸ್ತ್ರಚಿಕಿತ್ಸೆಗಳು, ವಿಶೇಷ ಕಾಳಜಿಯ ಆರೈಕೆ, ಮಿತದರದ ಚಿಕಿತ್ಸೆ, ಶುಚಿತ್ವದೊಂದಿಗೆ ಸ್ನೇಹಮಯ ವಾತಾವರಣ, ಉಚಿತ ಡಯಾಲಿಸಿಸ್ ಸೇವೆ, ಉಚಿತ ವೈದ್ಯಕೀಯ ಶಿಬಿರಗಳು, -ಎಲ್ಲವೂ ಜನರ ವಿಶ್ವಾಸಗಳಿಸಿದೆ.

ಭಾರತದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ವೈದ್ಯರನ್ನು ಪ್ರತಿನಿಧಿಸುವ ವೃತ್ತಿಪರ ಸಂಸ್ಥೆಯಾದ ಭಾರತದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸೊಸೈಟಿಗಳ ಒಕ್ಕೂಟ ಸಂಸ್ಥೆಯಿಂದ ಸುರಕ್ಷಿತ ಹೆರಿಗೆಯನ್ನು ಖಾತ್ರಿಪಡಿಸುವ ಗುಣಮಟ್ಟದ ಮಾನದಂಡ ಅನುಸರಿಸುತ್ತಿರುವ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಮಾನ್ಯತಾ ಪ್ರಮಾಣಪತ್ರ ಕೂಡ ಈಗಾಗಲೇ ದೊರೆತಿದೆ.

ಈ ಆಸ್ಪತ್ರೆಯು ರಾಷ್ಟ್ರೀಯ ಮಾನ್ಯತಾ ಮಂಡಳಿಯ ಮಾನದಂಡದಂತೆ ವೈದ್ಯಕೀಯ ಸೇವೆ ನೀಡುತ್ತಿರುವುದರಿಂದ 2ನೇ ಬಾರಿಗೆ ಎನ್.ಎ.ಬಿ.ಹೆಚ್ ಪ್ರಮಾಣಪತ್ರ ದೊರೆತ್ತಿದ್ದು, ಡಿ. ಹರ್ಷೇಂದ್ರ ಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್. ಪಿ, ನರ್ಸಿಂಗ್ ಅಧೀಕ್ಷಕಿ ಶೆರ್ಲಿ, ಡಾ| ಮೀರಾ ಅನುಪಮಾ, ಡಾ| ಪ್ರೌಸ್ಟಿಲ್ ಹಾಗೂ ಎನ್.ಎ.ಬಿ.ಹೆಚ್ ನಿಯಮ ಪಾಲನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
