ಉತ್ತರ ಪ್ರದೇಶ: (ಜು.17) ಪರಮ ಪಾಪಿಯೋರ್ವ ಪೊಲೀಸ್ ಠಾಣೆ ಮುಂದೆಯೇ ತನ್ನ ತಾಯಿಗೆ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ. ಉತ್ತರ ಪ್ರದೇಶದ ಅಲಿಗಢದ ಖೈರ್ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಈ ಘಟನೆ ನಡೆದಿದೆ.
ತನ್ನ ಸಂಬಂಧಿಕರೊಂದಿಗಿನ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತನ್ನ ತಾಯಿ ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ಯುವಕ ಬಿಂಬಿಸಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.
ಇನ್ನೂ ಯುವಕ ತನ್ನ ತಾಯಿಗೆ ಬೆಂಕಿ ಹಚ್ಚುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಯುವಕನನ್ನು ಅರೆಸ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ.
ಸಂಬಂಧಿಕರೊಂದಿಗೆ ಆಸ್ತಿ ವಿವಾದದಿಂದಾಗಿ ಮಹಿಳೆ ಮತ್ತು ಆಕೆಯ ಮಗ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಸ್ವಲ್ಪ ಸಮಯದ ನಂತರ, ಮಹಿಳೆ ಮತ್ತು ಆಕೆಯ ಮಗ ಪೊಲೀಸ್ ಠಾಣೆಯಿಂದ ಹೊರಬಂದು ಆವರಣದೊಳಗಿನ ನಿರ್ಜನ ಸ್ಥಳಕ್ಕೆ ತೆರಳಿದ್ದಾರೆ.
ಬಳಿಕ ಮಹಿಳೆ ತನ್ನ ದೇಹದಾದ್ಯಂತ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಪೊಲೀಸರಿಗೆ ಬೆದರಿಕೆ ಹಾಕಲು ಶುರು ಮಾಡಿದ್ದಾಳೆ.
ಮಹಿಳೆ ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯ ಕಡೆಗೆ ಧಾವಿಸಿ ಆಕೆ ಬೆಂಕಿ ಹಚ್ಚಿಕೊಳ್ಳದಂತೆ ತಡೆಯಲು ಬಂದಿದ್ದಾರೆ. ಆಕೆಯ ಮಗ ಇಡೀ ಘಟನೆಯನ್ನು ತನ್ನ ಮೊಬೈಲ್ ಫೋನಿನಲ್ಲಿ ರೆಕಾರ್ಡ್ ಮಾಡಿದ್ದಾನೆ.
ಅಲ್ಲದೇ ತನ್ನ ತಾಯಿಗೆ ಬೆಂಕಿ ಹಚ್ಚುವುದನ್ನು ಪೊಲೀಸ್ ಅಧಿಕಾರಿ ತಡೆದಿರುವುದನ್ನು ನೋಡಿದ ಯುವಕ, ಲೈಟರ್ ಬಳಸಿ ತಾಯಿಗೆ ಬೆಂಕಿ ಹಚ್ಚಿದ್ದಾನೆ.
ತನ್ನ ತಾಯಿ ಜೀವಂತವಾಗಿ ಉರಿಯುತ್ತಿರುವಾಗ ಯುವಕ ಬೆಂಕಿಯನ್ನು ಆರಿಸಲು ಮುಂದಾಗದೇ ರೆಕಾರ್ಡಿಂಗ್ ಮಾಡುತ್ತಲೇ ಇದ್ದನು. ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಬೆಂಕಿಯನ್ನು ನಂದಿಸಿದ್ದು, ಅವರ ಕೈಗೆ ಸುಟ್ಟ ಗಾಯಗಳಾಗಿವೆ ಎಂದು ವರದಿಯಿಂದ ತಿಳಿದು ಬಂದಿದೆ.
ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಆಕೆಯ ಸ್ಥಿತಿ ಗಂಭೀರವಾದುದನ್ನು ನೋಡಿದ ವೈದ್ಯರು ಆಕೆಯನ್ನು ಅಲಿಗಢಕ್ಕೆ ಕಳುಹಿಸಿದ್ದರು, ಅಲ್ಲಿ ಅವರು ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಆರೋಪ ಪಟ್ಟಿ ಸಲ್ಲಿಸಲಾಗಿದೆ ಮಗನನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.