ಉಜಿರೆ:(ಮಾ.15) ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಯುವ ಹೆಚ್.ಪಿ.ವಿ ವ್ಯಾಕ್ಸಿನೇಷನ್ ಲಸಿಕಾ ಶಿಬಿರವನ್ನು ಬೆಳ್ತಂಗಡಿ ರೋಟರಿ ಕ್ಲಬ್ ಸಹಯೋಗದಲ್ಲಿ ನಡೆಸಲಾಯಿತು. ಹೆಚ್.ಪಿ.ವಿ ವ್ಯಾಕ್ಸಿನೇಷನ್ ಲಸಿಕಾ ಶಿಬಿರವನ್ನು ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಅವರು ಉದ್ಘಾಟಿಸಿದರು.


ಇದನ್ನೂ ಓದಿ: 🟠ಪುತ್ತೂರು: ವಿದ್ಯಾರ್ಥಿಗಳಿಗೆ ಭಾವಪೂರ್ಣ ಬೀಳ್ಕೊಡುಗೆ ಕಾರ್ಯಕ್ರಮ
ಬಳಿಕ ಮಾತನಾಡಿದ ಅವರು ಸಮಾಜದ ಒಳಿತಿಗಾಗಿ ನೂರಾರು ಯೋಜನೆಗಳನ್ನು ಹಮ್ಮಿಕೊಂಡು ಸಮಾಜಮುಖಿ ಸೇವೆ ಮಾಡುತ್ತಿರುವ ಡಾ| ವೀರೇಂದ್ರ ಹೆಗ್ಗಡೆಯವರು ಜನರ ಆರೋಗ್ಯದ ಬಗ್ಗೆ ಅತೀವ ಕಾಳಜಿ ಹೊಂದಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ವೈದ್ಯಕೀಯ ಸೇವೆ ನೀಡುತ್ತಿರುವ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಈ ಶಿಬಿರವನ್ನು ನಡೆಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದಲ್ಲಿ ಪ್ರತಿ ವರ್ಷ 6 ಲಕ್ಷಕ್ಕೂ ಅಧಿಕ ಗರ್ಭಕಂಠದ ಕ್ಯಾನ್ಸರ್ ಪತ್ತೆಯಾಗುತ್ತಿದೆ.
ಇದರಿಂದ ಮೂರುವರೆ ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪುತ್ತಿದ್ದಾರೆ. ಇದನ್ನು ತಡೆಯುವ ಉದ್ದೇಶದಿಂದ ರೋಟರಿ ಕ್ಲಬ್ ವತಿಯಿಂದ ಇಂತಹ
ವ್ಯಾಕ್ಸಿನೇಷನ್ ನೀಡಲಾಗುತ್ತಿದೆ ಎಂದರು.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಪೂಜ್ಯ ಡಾ|ವೀರೇಂದ್ರ ಹೆಗ್ಗಡೆಯವರು ಸಾರ್ವಜನಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಈ ಆಸ್ಪತ್ರೆಯ ನಿರ್ಮಾಣದ ಉದ್ದೇಶ ಕೇವಲ ವೈದ್ಯಕೀಯ ಸೇವೆ ನೀಡುವುದು ಮಾತ್ರವಲ್ಲ ಜೊತೆ-ಜೊತೆಗೆ ಗ್ರಾಮೀಣ ಜನತೆಗೆ ಆರೋಗ್ಯದ ಜಾಗೃತಿ ಮೂಡಿಸುವುದು ಕೂಡ ಆಗಿದೆ. ಬೆಳ್ತಂಗಡಿ ರೋಟರಿ ಕ್ಲಬ್ ಅತ್ಯುತ್ತಮ ಕೆಲಸ ಮಾಡುತ್ತಿದೆ. ಮೂರು ಸಾವಿರ ರೂಪಾಯಿ ಮೌಲ್ಯದ ಈ ಲಸಿಕೆಯನ್ನು ರಿಯಾಯತಿ ದರದಲ್ಲಿ ರೋಟರಿ ಕ್ಲಬ್ ಒದಗಿಸಿಕೊಡುತ್ತಿದೆ. ಈ ಲಸಿಕೆ ಇಂತಹ ಮಾರಕ ರೋಗವನ್ನು ತಡೆಯಲು ಸಹಕಾರಿಯಾಗಿದೆ ಎಂದರು.

ಬೆಳ್ತಂಗಡಿ ರೋಟರಿ ಕ್ಲಬ್ ಪೂರ್ವ ಕಾರ್ಯದರ್ಶಿ ಶ್ರೀಧರ್ ಕೆ.ವಿ, ಹಾಗೂ ಅಬೂಬಕ್ಕರ್ ಶಿಬಿರಕ್ಕೆ ಶುಭ ಹಾರೈಸಿದರು. ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದೇವೆಂದ್ರ ಕುಮಾರ್, ಮುಖ್ಯ ವೈದ್ಯಾಧಿಕಾರಿ ಡಾ. ಸಾತ್ವಿಕ್ ಜೈನ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ| ಅನ್ವಿತಾ ಶತಾನಂದ ಪ್ರಸಾದ್ ಉಪಸ್ಥಿತರಿದ್ದರು. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ| ಪ್ರಿಯಾಂಕ ಜಯದೇವ್ ಲಸಿಕೆಯ ಮಹತ್ವವನ್ನು ವಿವರಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಚಿದಾನಂದ ಡಿ.ಅರ್ .ಕಾರ್ಯಕ್ರಮ ನಿರೂಪಿಸಿದರು. 112 ಮಂದಿ ಲಸಿಕೆ ಪಡೆದುಕೊಳ್ಳುವ ಮೂಲಕ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.
