Tue. Mar 18th, 2025

ಬೆಂಗಳೂರು (ಮಾ.18): ಇದೇ ಮಾರ್ಚ್​​ 22ರಂದು ಕರ್ನಾಟಕ ಬಂದ್ ಫಿಕ್ಸ್ ಆಗಿದೆ. ಬೆಳಗಾವಿಯಲ್ಲಿ ಮರಾಠಿ ಪುಂಡರ ದಬ್ಬಾಳಿಕೆ ವಿರುದ್ಧ ಕನ್ನಡ ಪರ ಸಂಘಟನೆಗಳು ಇದೇ ಶನಿವಾರ ಅಂದ್ರೆ ಮಾರ್ಚ್ 22ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ಸಂಬಂಧ ಇಂದು (ಮಾರ್ಚ್​ 18) ಬೆಂಗಳೂರಿನಲ್ಲಿ ‘ಅಖಂಡ ಕರ್ನಾಟಕ ಬಂದ್‌’ಗೆ ಕುರಿತು ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್​ ಮಾಡಲು ತೀರ್ಮಾನವಾಗಿದೆ.

ಇದನ್ನೂ ಓದಿ: 💠ಉಜಿರೆ: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಭೌತಶಾಸ್ತ್ರ ರಾಷ್ಟ್ರೀಯ ವಿಚಾರ ಸಂಕಿರಣ

ಯಾರು ವಾಹನ ಹತ್ತಬೇಡಿ:​
ಇನ್ನು ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಮಾರ್ಚ್ 22ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆ ತನಕ ಬಂದ್ ಆಗುವುದು ನಿಶ್ಚಿತ. ಬೆಳಗ್ಗೆ 10:30ಕ್ಕೆ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ ತನಕ ಪ್ರತಿಭಟನಾ ಮೆರವಣಿಗೆ ಮಾಡುತ್ತೇವೆ. ಹೀಗಾಗಿ ನಿಮ್ಮ ಸ್ವಾಭಿಮಾನಕ್ಕಾಗಿ ಯಾರು ವಾಹನ ಹತ್ತಬೇಡಿ ಸಾರ್ವಜನಿಕರಿಗೆ ಮನವಿ ಮಾಡಿದರು.

ಮಾರ್ಚ್ 22ರಂದು ಯಾರು ಮೆಟ್ರೋ ಹತ್ತಬೇಡಿ:
ಮಾರ್ಚ್ 22ರಂದು ಯಾರು ಮೆಟ್ರೋ ಹತ್ತಬೇಡಿ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜೊತೆ ಮಾತನಾಡಿದ್ದೇವೆ. ಅವತ್ತು ಬಸ್ ಓಡಿಸಬಾರದೆಂದು ಹೇಳಿದ್ದೇವೆ. ಇನ್ನೂ ಒಂದು ಸಲ ಹೇಳುತ್ತೇವೆ ಅವತ್ತು ಬಸ್ ಓಡಿಸಬಾರದು. ಮಂತ್ರಿ, ಸಿಎಂ ಕಾರಿನ ಚಾಲಕರೇ ಆಗಿರಲಿ, ಮಾನ ಮರ್ಯಾದೆ ಗೌರವ ಅಭಿಮಾನ ಸ್ವಾಭಿಮಾನಕ್ಕೆ ಅಂದು ಗಾಡಿ ಹತ್ತಬೇಡಿ. ಬೆಳಗಾವಿಯಿಂದ ಎಂಇಎಸ್ ಅನ್ನು ಒದ್ದು ಓಡಿಸಬೇಕೋ ಬೇಡ್ವೋ? ಬೆಳಗಾವಿ ಘಟನೆ ಕಣ್ಣಿಗೆ ಚಿಕ್ಕದಾಗಿರಬಹುದು. ಆದ್ರೆ ನಮ್ ಕಣ್ಣಿಗೆ ಇದು ಬೆಟ್ಟ. ಕರ್ನಾಟಕದಲ್ಲಿ ಶಿವಾಜಿ ಪ್ರತಿಮೆ ಇದೆ. ಮಹಾರಾಷ್ಟ್ರದಲ್ಲಿ ನಮ್ಮ ಕನ್ನಡಿಗರ ಪ್ರತಿಮೆ ಇಲ್ಲ. ಕರ್ನಾಟಕದಲ್ಲಿ ತಮಿಳು, ತೆಲುಗು, ಮಾರ್ವಾಡಿ, ಮಲಯಾಳಿಗರು ಬೇಕಾ? ಎಂದು ವಾಟಾಳ್ ಪ್ರಶ್ನಿಸಿದರು.

ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಹಿಂದಿಯಲ್ಲಿ ಭಾಷಣ ಮಾಡುತ್ತಾರೆ. ವಿಧಾನಸಭೆಯೊಳಗೆ ಯಾಕೆ ಯಾರು ಇದನ್ನು ವಿರೋಧ ಮಾಡಿಲ್ಲ. ಮೂಕ ಪ್ರೇಕ್ಷಕರಂತೆ ಮಾನ ಮರ್ಯಾದೆ ಇಲ್ಲದೇ ಶಾಸಕರು ಸುಮ್ಮನಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು, ದರೋಡೆಕೋರರು, ಕನ್ನಡ ಕಲಿಸಲ್ಲ ಅಂತ ನ್ಯಾಯಾಲಯಕ್ಕೆ ಹೋಗ್ತಾರೆ. ಚಾಲಕರು ಯಾರೇ ಇರಲಿ, ಬಸ್ ಆಟೋ, ಕಾರು ಚಾಲಕರಿಗೆ ಇದು ಸ್ವಾಭಿಮಾನ, ಮರ್ಯಾದೆ ಪ್ರಶ್ನೆಯಾಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು.

ಬಂದ್​ ಆಗುತ್ತಾ ಹೋಟೆಲ್​?
ಹೋಟೆಲ್ ನವರು ಈ ಬಂದ್ ಗೆ ಬೆಂಬಲ ಕೊಡಬೇಕು ಎಂದು ಕಾರ್ಮಿಕ ಸಂಘಟನೆಯ ರವಿ ಬೈಂದೂರು ಮನವಿ ಮಾಡಿದ್ದಾರೆ. ಒಂದು ವೇಳೆ ಹೋಟೆಲ್ ನವರು ಬಂದ್ ಗೆ ಬೆಂಬಲ‌ ಕೊಡಲಿಲ್ಲ ಅಂದರೆ ನಾವು ನಿಮ್ಮ ಹೋರಾಟಕ್ಕೆ ಕೈ ಜೋಡಿಸಲ್ಲ. ನಮಗೆ ನಿಮ್ಮ ನೈತಿಕ ಬೆಂಬಲ ಬೇಡ, ಪೂರ್ಣ ಬೆಂಬಲ ಬೇಕು ಎಂದಿದ್ದಾರೆ. ಆದ್ರೆ, ಹೋಟೆಲ್ ಮಾಲೀಕರ ಸಂಘ ಮಾತ್ರ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.

Leave a Reply

Your email address will not be published. Required fields are marked *