ಬೆಳ್ತಂಗಡಿ :(ಮಾ.18) : ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ ದಟ್ಟ ಅಡವಿಯ ನಡುವೆ ಇರುವ ಸುಲ್ಕೇರಿ ಮೊಗ್ರು ಗ್ರಾಮದ ಪಂಜಾಲ, ಮಾಳಿಗೆ ಬೈಲಿನ 15 ಆದಿವಾಸಿ ಕುಟುಂಬ ಸೇರಿ ಒಟ್ಟು 28 ಕುಟುಂಬಗಳಿಗೆ ವಿದ್ಯುತ್ ಭಾಗ್ಯ ಲಭಿಸಿದೆ.

ಇದನ್ನೂ ಓದಿ: ❌Karnataka Bandh: ಮಾ.22ರಂದು ಕರ್ನಾಟಕ ಬಂದ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 27ರಂದು ನಡೆದ ಸಭೆಯಲ್ಲಿ ಆದಿವಾಸಿಗಳು ನೆಲೆಸಿರುವ ಅರಣ್ಯ ಪ್ರದೇಶದ ವಸತಿ ಪ್ರದೇಶಗಳಿಗೆ ವಿದ್ಯುತ್, ನೀರು, ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತ ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿ, ವಿದ್ಯುತ್ ಮಾರ್ಗ ಅಳವಡಿಕೆಗೆ ಅರಣ್ಯ ಭೂಮಿ ಪರಿವರ್ತನೆಗಾಗಿ ಪರಿವೇಶ್ ಪೋರ್ಟಲ್ ನಲ್ಲಿ ಅರ್ಜಿ ಹಾಕಿಸಿ, ಅನುಮತಿ ಪಡೆಯಲು ಕ್ರಮ ವಹಿಸಿದ್ದರು. ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದರು.


ಬೆಳ್ತಂಗಡಿಯ ಕಾಂಗ್ರೆಸ್ ನಾಯಕ ರಕ್ಷಿತ್ ಶಿವರಾಂ ಅವರು ಸ್ವಯಂ ಆಸಕ್ತಿಯಿಂದ ದೆಹಲಿಗೆ ತೆರಳಿ, ಕೇಂದ್ರ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಇಲಾಖೆಗಳಿಗೆ ಹೋಗಿ ಶೀಘ್ರ ಅನುಮತಿ ದೊರಕಿಸಲು ಶ್ರಮಿಸಿದ್ದಾರೆ.


ಸರ್ಕಾರದ ಸಂಬಂದಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಘಟಿತ ಪ್ರಯತ್ನದ ಫಲವಾಗಿ ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕ ಪಂಜಾಲ, ಮಾಳಿಗೆ ಬೈಲಿನ 28 ಕುಟುಂಬಗಳಿಗೆ ವಿದ್ಯುತ್ ಭಾಗ್ಯ ಲಭಿಸಿದೆ. ಇಂದು ಈ ಸಂಬಂಧ ರಾಜ್ಯದ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಭೆಯಲ್ಲಿ ಈ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಅನುಮೋದನೆ ಲಭಿಸುವ ನಿರೀಕ್ಷೆ ಇದೆ.
