Wed. Apr 16th, 2025

Mangaluru : ಆಟೋ ಚಾಲಕ ಶರೀಫ್‌ ಕೊಲೆ ಪ್ರಕರಣದ ಆರೋಪಿ ಅರೆಸ್ಟ್‌ – ಹಳೆಯ ಗಲಾಟೆಯೇ ಕೊಲೆಗೆ ಕಾರಣವಾಯಿತಾ?!

ಮಂಗಳೂರು :(ಎ.15) ಮಂಜೇಶ್ವರ ಕುಂಜತ್ತೂರು ಬಳಿ ನಿರ್ಜನ ಪ್ರದೇಶದ ಬಾವಿಯಲ್ಲಿ ಪತ್ತೆಯಾದ ಮಂಗಳೂರಿನ ಆಟೋ ಚಾಲಕ ಮೊಹಮ್ಮದ್ ಶರೀಫ್ ಅವರ ಸಾವು ಕೊಲೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿದು ಬಂದಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಮಂಜೇಶ್ವರ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತನನ್ನು ಮಂಗಳೂರಿನ ಹೊರವಲಯದ ಸುರತ್ಕಲ್ ಮೂಲದ ಅಭಿಷೇಕ್ ಶೆಟ್ಟಿ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ⭕ಬಂಟ್ವಾಳ: ಬಂಟ್ವಾಳದ ಯುವಕ ದಕ್ಷಿಣ ಆಫ್ರಿಕಾದಲ್ಲಿ ನಿಧನ

ರಸ್ತೆಯಲ್ಲಿ ನಡೆದ ಹಳೆಯ ಗಲಾಟೆಯೇ ಈ ಕೊಲೆಗೆ ಕಾರಣ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಆರೋಪಿ ಅಭಿಷೇಕ್ ಮಂಗಳೂರಿನಲ್ಲಿ ಖಾಸಗಿ ಶಾಲಾ ಬಸ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದ, ಅಲ್ಲದೆ ಮಾದಕ ವಸ್ತುಗಳ ದಾಸನಾಗಿದ್ದ ಎಂದು ಕಾಸರಗೋಡು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿ ಬಾಲಕೃಷ್ಣನ್ ನಾಯರ್ ತಿಳಿಸಿದ್ದಾರೆ. ಆರೋಪಿ ವಿಚಾರಣೆ ವೇಳೆ ಕೊಲೆ ಕಾರಣ ತಿಳಿಸಿದ್ದು, ಆರೋಪಿ ಅಭಿಷೇಕ್ ಶೆಟ್ಟಿ ಖಾಸಗಿ ಶಾಲೆಯ ಬಸ್ ಚಲಾಯಿಸುತ್ತಿರುವ ಸಂದರ್ಭ ಮಂಗಳೂರಿನ ರಸ್ತೆಯಲ್ಲಿ ಜಾಗ ಬಿಡದ ಕಾರಣಕ್ಕೆ ಆಟೋ ಚಾಲಕ ಮಹಮ್ಮದ್ ಶರೀಫ್ ಜೊತೆ ಸಣ್ಣ ಗಲಾಟೆ ನಡೆದಿದೆ.

ಈ ಗಲಾಟೆ ನಡೆದ ಬಳಿಕ ಆರೋಪಿ ಅಭಿಷೇಕ್ ಚಲಾಯಿಸುತ್ತಿದ್ದ ಬಸ್ ಗೆ ಶರೀಫ್ ಪರಿಚಯದ ಆಟೋ ಚಾಲಕರು ರಿಕ್ಷಾವನ್ನು ಅಡ್ಡಗಟ್ಟಿ ತೊಂದರೆ ಕೊಟ್ಟಿದ್ದಾರೆ. ಇದು ಶರೀಫ್ ಹೇಳಿಯೆ ಮಾಡಿಸಿದ್ದು ಎಂದು ಆರೋಪಿ ಅಭಿಷೇಕ್ ನಂಬಿದ್ದ, ಅಲ್ಲದೆ ಶರೀಫ್ ತನ್ನ ವಿರುದ್ದ ಕೆಲಸ ಮಾಡುತ್ತಿದ್ದ ಖಾಸಗಿ ಶಾಲೆಗೆ ದೂರು ಸಲ್ಲಿಸಿದ್ದಾನೆ ಇದರಿಂದಾಗಿ ತನ್ನ ಕೆಲಸ ಹೋಗಿತ್ತು ಎಂದು ಅಭಿಷೇಕ್ ನಂಬಿದ್ದ, ಶಾಲೆಯಲ್ಲಿ ಕೆಲಸ ಕಳೆದುಕೊಂಡ ಬಳಿಕ ಅಭಿಷೇಕ್ ಮನೆಯಲ್ಲಿ ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದು, ಸಂಸಾರದಲ್ಲಿ ಸಮಸ್ಯೆ ಪ್ರಾರಂಭವಾಗಿತ್ತು, ಹೀಗಾಗಿ ಈ ಎಲ್ಲಾ ಕಾರಣಕ್ಕೆ ಮಹಮ್ಮದ್ ಶರೀಫ್ ಕಾರಣ ಎಂದು ನಂಬಿದ್ದ ಅಭಿಷೇಕ ಶರೀಫ್ ಮೇಲೆ ಹಗೆ ತೀರಿಸಿಕೊಳ್ಳಲು ಯೋಚಿಸಿದ್ದ.

ಅದರಂತೆ ಏಪ್ರಿಲ್ 9 ರ ರಾತ್ರಿ ಅಭಿಷೇಕ್ ಬೈಕಂಪಾಡಿಯಿಂದ ಶರೀಫ್‌ನ ಆಟೋದಲ್ಲಿ ಪ್ರಯಾಣ ಬೆಳೆಸಿದ್ದ, ಅಭಿಷೇಕ್ ಹಾಗೂ ಶರೀಫ್ ನಡುವೆ ಗಲಾಟೆ ನಡೆದ ಸಂದರ್ಭ ಅಭಿಷೇಕ್ ಉದ್ದ ತಲೆಗೂದಲನ್ನು ಬಿಟ್ಟಿದ್ದ, ಇದೀಗ ಕೂದಲನ್ನು ಚಿಕ್ಕದಾಗಿ ಕತ್ತರಿಸಿದ ಪರಿಣಾಮ ಶರೀಫ್ ಅವನನ್ನು ಗುರುತಿಸಲು ಸಾಧ್ಯವಾಗಿಲ್ಲ. ಅಭಿಷೇಕ ಆಟೋರಿಕ್ಷಾವನ್ನು ಮಂಜೇಶ್ವರದ ಕುಂಜತ್ತೂರು ಪಡುವು ಎಂಬ ಪ್ರದೇಶಕ್ಕೆ ತೆರಳುವಂತೆ ಹೇಳಿದ್ದಾನೆ. ಈ ಪ್ರದೇಶದಲ್ಲಿ ಅಭಿಷೇಕ ಮಾದಕ ವಸ್ತುಗಳನ್ನು ಸೇವನೆಗೆ ಆಗಾಗ ಹೋಗುತ್ತಿರುವ ಸ್ಥಳವಾಗಿತ್ತು. ನಿರ್ಜನ ಪ್ರದೇಶವಾದ ಹಿನ್ನಲೆ ಆರೋಪಿ ಅಭಿಷೇಕ್ ಶರೀಫ್ ನನ್ನು ಕುತ್ತಿಗೆಗೆ ಇರಿದು ಕೊಲೆ ಮಾಡಿ ಬಳಿಕ ದೇಹವನ್ನು ಅಲ್ಲೆ ಪಾಳು ಬಿದ್ದ ಬಾವಿಗೆ ಹಾಕಿದ್ದಾನೆ. ಬಳಿಕ ದಾರಿಯಲ್ಲಿ ಸಿಕ್ಕ ಸ್ಕೂಟರ್ ನಲ್ಲಿ ಡ್ರಾಪ್ ತೆಗೆದುಕೊಂಡು ತನ್ನ ಸಂಬಂಧಿಕರ ಮನೆಗೆ ತೆರಳಿದ್ದಾನೆ.

Leave a Reply

Your email address will not be published. Required fields are marked *