ಉಜಿರೆ :(ಎ.17) ಉಜಿರೆ ಅನುಗ್ರಹ ಪಿ.ಯು.ಕಾಲೇಜಿನಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಜೈಲಿನಿಂದ ಬಾಡಿವಾರೆಂಟ್ ಮೂಲಕ ಕರೆತಂದು ಮಹಜರು ನಡೆಸಲಾಗಿದೆ.

ಉಜಿರೆ ಅನುಗ್ರಹ ಪಿ.ಯು.ಕಾಲೇಜಿನಲ್ಲಿ ಮಾ.3 ರಂದು ರಾತ್ರಿ ಕಳ್ಳರು ಯುವತಿಯರ ಚೂಡಿದಾರ ಡ್ರೆಸ್ ಹಾಕಿಕೊಂಡು ನುಗ್ಗಿ ಸಿಸಿಕ್ಯಾಮರಾದ ಹಾರ್ಡ್ ಡಿಸ್ಕ್ ಕಳ್ಳತನ ಮಾಡಿದ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಾ.4 ರಂದು ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು.
ಉಜಿರೆ ಕಳ್ಳತನ ಪ್ರಕರಣದ ಬಳಿಕ ಆರೋಪಿಗಳಿಬ್ಬರು ಉಡುಪಿ ಜಿಲ್ಲೆಯ ಕಾರ್ಕಳರಲ್ಲಿ ಕಳ್ಳತನ ಪ್ರಕರಣದಲ್ಲಿ ಕಾರು ಸಮೇತ ಪೊಲೀಸರು ಬಂಧಿಸಿ ವಿಚಾರಣೆ ಬಳಿಕ ಉಜಿರೆ ಕಳ್ಳತನ ಪ್ರಕರಣ ಬಾಯಿಬಿಟ್ಟಿದ್ದರು. ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಉಡುಪಿ ಜಿಲ್ಲೆಯ ಹಿರಿಯಡ್ಕ ಜೈಲಿಗೆ ಕಳುಹಿಸಲಾಗಿತ್ತು.



ಇಬ್ಬರು ಆರೋಪಿಗಳಾದ ಉಡುಪಿ ಜಿಲ್ಲೆಯ ನಾವೂಂದ ನಿವಾಸಿ ಗರುಡ ಗ್ಯಾಂಗ್ ಸದಸ್ಯ ರಿಝ್ವಾನ್@ ರಿಲ್ವಾನ್(24) ಮತ್ತು ಉಡುಪಿ ಜಿಲ್ಲೆಯ ಬೈಂದೂರಿನ ಹರ್ಷಿತ್@ ಅವಿನಾಶ್ (25) ಎಂಬವರನ್ನು ಉಡುಪಿಯ ಹಿರಿಯಡ್ಕ ಜೈಲಿನಿಂದ ಬಾಡಿ ವಾರೆಂಟ್ ಮೂಲಕ ಬೆಳ್ತಂಗಡಿ ಪೊಲೀಸರು ಏ.15 ರಂದು ಬೆಳಗ್ಗೆ ಕರೆತಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಒಂದು ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಬಳಿಕ ಉಜಿರೆ ಅನುಗ್ರಹ ಪಿ.ಯು.ಕಾಲೇಜಿಗೆ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಯಲ್ಲಪ್ಪ ನೇತೃತ್ವದ ಪೊಲೀಸರ ತಂಡ ಮಹಜರು ನಡೆಸಿ ವಾಪಸ್ ಸಂಜೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಇಬ್ಬರನ್ನು ಉಡುಪಿ ಹಿರಿಯಡ್ಕ ಜೈಲಿಗೆ ಕಳುಹಿಸಲಾಗಿದೆ ಎಂದು ಮಾಹಿತಿ ಲಭಿಸಿದೆ.

