ಉಳ್ಳಾಲ:(ಎ.20)ಉಳ್ಳಾಲ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತ್ರಸ್ತೆಯಿಂದ ಪೊಲೀಸರು ಒಂದೊಂದೇ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಈ ವೇಳೆ ಅನೇಕ ಶಾಕಿಂಗ್ ವಿಚಾರಗಳು ಬಹಿರಂಗವಾಗಿದೆ.

ಸಂತ್ರಸ್ತೆಯು ಸುಮಾರು 3 ತಿಂಗಳ ಹಿಂದೆ ಪ್ರಿಯತಮನ ಜತೆ ಕೇರಳದ ಕಡೆಗೆ ಕೆಲಸಕ್ಕೆ ಬಂದಿದ್ದಳು. ಆದರೆ ಎಪ್ರಿಲ್ 16 ರಂದು ಇಬ್ಬರ ನಡುವೆ ಜಗಳವಾಗಿತ್ತು, ಈ ಜಗಳದ ವೇಳೆ ಯುವತಿಯ ಗೆಳೆಯ ಆಕೆಯ ಮೊಬೈಲ್ ನ್ನು ಒಡೆದು ಹಾಕಿದ್ದ ಎನ್ನಲಾಗಿದೆ. ಅಲ್ಲದೇ ಆಕೆಯನ್ನು ಮನೆಯಿಂದ ಹೊರಹಾಕಿದ್ದ. ಈ ಹಿನ್ನಲೆ ಯುವತಿ ಕೇರಳದಿಂದ ಮಂಗಳೂರಿಗೆ ಬರುವ ರೈಲು ಹತ್ತಿದ್ದಳು.

ಮಂಗಳೂರಿನಲ್ಲಿ ಇಳಿದ ಆಕೆ ಊರಿಗೆ ಹೋಗಲು ಹಣವಿಲ್ಲದೆ ಅಸಹಾಯಕಳಾಗಿದ್ದಳು. ಈ ವೇಳೆ ಆರೋಪಿ ಪ್ರಭುರಾಜ್ ಬಳಿ ಸಹಾಯ ಕೇಳಿದ್ದಳು. ಅದನ್ನೇ ದುರ್ಬಳಕೆ ಮಾಡಿಕೊಂಡ ಆತ ಆಕೆಯ ಮೊಬೈಲ್ ರಿಪೇರಿ ಮಾಡಿ ಪಶ್ಚಿಮ ಬಂಗಾಳದಲ್ಲಿರುವ ಸಹೋದರಿಗೆ ಕರೆ ಮಾಡುವಂತೆ ತಿಳಿಸಿದ್ದ.

ಸಾಮೂಹಿಕ ಅತ್ಯಾಚಾರಕ್ಕೀಡಾದ ಪಶ್ಚಿಮ ಬಂಗಾಳದ ಯುವತಿಯ ಅಕ್ಕ, ಆಟೊ ಚಾಲಕನಿಗೆ ₹2 ಸಾವಿರವನ್ನು ‘ಗೂಗಲ್ ಪೇ’ ಮೂಲಕ ಪಾವತಿಸಿ, ತಂಗಿಯನ್ನು ಸುರಕ್ಷಿತವಾಗಿ ರೈಲು ಹತ್ತಿಸುವಂತೆ ಕೇಳಿಕೊಂಡಿದ್ದಳು ಎಂದಿದ್ದಳು. ಆಗ ಆರೋಪಿ ಪ್ರಭುರಾಜ್ ಪಶ್ಚಿಮ ಬಂಗಾಳದ ರೈಲು ತಡವಾಗಿದೆ ಎಂದು ನಂಬಿಸಿ ಸುಮಾರು 6 ಗಂಟೆ ರಿಕ್ಷಾದಲ್ಲೇ ಸುತ್ತಾಡಿಸಿ ಅಮಲು ಬರುವ ಪಾನೀಯ ಕುಡಿಸಿ ತಡರಾತ್ರಿ ವೇಳೆ ಮೂವರು ಸೇರಿ ಅತ್ಯಾಚಾರವೆಸಗಿದ್ದಾರೆ ಎಂದು ತನಿಖೆ ವೇಳೆ ಗೊತ್ತಾಗಿದೆ.

ಮುನ್ನೂರು ಗ್ರಾಮದ ನೇತ್ರಾವತಿ ನದಿ ತಟದ ಬಂಗ್ಲೆ ಹೌಸ್ ಬಳಿ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ಪೊಲೀಸರು ಪಡೆದಿದ್ದಾರೆ. ಅತ್ಯಾಚಾರ ಕುರಿತಂತೆ ವೈದ್ಯಕೀಯ ವರದಿ ಇನ್ನೂ ಪೊಲೀಸರ ಕೈಸೇರಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ಸಂತ್ರಸ್ತೆ ಚೇತರಿಸಿಕೊಳ್ಳುತ್ತಿದ್ದು, ಇಲ್ಲಿಯವರೆಗೆ ಆಕೆಯ ಸಂಬಂಧಿಕರು ಮಂಗಳೂರಿಗೆ ಆಗಮಿಸಿಲ್ಲ ಎಂದು ತಿಳಿದು ಬಂದಿದೆ.

